×
Ad

ಆದ್ಯತಾ ವ್ಯಾಪಾರ ಸ್ಥಾನಮಾನ ರದ್ದುಗೊಳಿಸಿದ ಅಮೆರಿಕದ ಕ್ರಮ ದುರದೃಷ್ಟಕರ: ಭಾರತ

Update: 2019-06-01 21:56 IST

ಹೊಸದಿಲ್ಲಿ,ಜೂ.1: ಪ್ರಮುಖ ಆದ್ಯತಾ ವ್ಯಾಪಾರ ಯೋಜನೆಯಡಿ ಫಲಾನುಭವಿ ದೇಶವಾಗಿ ಭಾರತದ ಮಾನ್ಯತೆಯನ್ನು ಅಂತ್ಯಗೊಳಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಸರಕಾರವು ‘ನಮ್ಮ ಜನರೂ ಉತ್ತಮ ಜೀವನ ಮಟ್ಟಕ್ಕಾಗಿ ಹಂಬಲಿಸುತ್ತಿರುವುದರಿಂದ ಭಾರತವು ವ್ಯಾಪಾರ ವಿಷಯಗಳಲ್ಲಿ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಸದಾ ಎತ್ತಿ ಹಿಡಿಯುತ್ತದೆ ’ ಎಂದು ಹೇಳಿದೆ.

ನಮ್ಮ ದ್ವಿಪಕ್ಷೀಯ ವ್ಯಾಪಾರ ಚರ್ಚೆಗಳ ಭಾಗವಾಗಿ ಪರಸ್ಪರ ಸ್ವೀಕಾರಾರ್ಹ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಅಮೆರಿಕದ ಮಹತ್ವದ ಕೋರಿಕೆಗಳ ಕುರಿತಂತೆ ಭಾರತವು ಪರಿಹಾರವೊಂದನ್ನು ಮುಂದಿರಿಸಿತ್ತು. ಇದನ್ನು ಅಮೆರಿಕವು ಒಪ್ಪಿಕೊಳ್ಳದಿದ್ದುದು ದುರದೃಷ್ಟಕರವಾಗಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

‘ದಿ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರನ್ಸ್(ಜಿಎಸ್‌ಪಿ)’ ಅಮೆರಿಕದ ಬೃಹತ್ ಮತ್ತು ಅತ್ಯಂತ ಹಳೆಯ ವ್ಯಾಪಾರ ಆದ್ಯತೆ ಯೋಜನೆಯಾಗಿದ್ದು,ಮಾನ್ಯತೆ ಹೊಂದಿದ ಫಲಾನುಭವಿ ದೇಶಗಳಿಂದ ಸಾವಿರಾರು ವಸ್ತುಗಳ ಸುಂಕಮುಕ್ತ ಆಮದಿಗೆ ಅವಕಾಶ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ರೂಪಿಸಲ್ಪಟ್ಟಿದೆ.

ಅಮೆರಿಕದ ಸರಕುಗಳಿಗೆ ತನ್ನ ಮಾರುಕಟ್ಟೆಗಳಲ್ಲಿ ನ್ಯಾಯಸಮ್ಮತ ಮತ್ತು ಯುಕ್ತ ಪ್ರವೇಶವನ್ನೊದಗಿಸುವುದಾಗಿ ಭಾರತವು ಭರವಸೆ ನೀಡಿಲ್ಲ,ಹೀಗಾಗಿ ಫಲಾನುಭವಿ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಅದರ ಮಾನ್ಯತೆಯನ್ನು 2019,ಜೂನ್ 5ರಿಂದ ಅಂತ್ಯಗೊಳಿಸಲು ತಾನು ನಿರ್ಧರಿಸಿದ್ದೇನೆ ಎಂದು ಟ್ರಂಪ್ ಶುಕ್ರವಾರ ಹೇಳಿದ್ದರು. ಈ ಕ್ರಮವು ದೇಶದ ಉದ್ಯಮಗಳಿಗೆ ಹಾನಿಯನ್ನುಂಟು ಮಾಡಬಹುದಾದ್ದರಿಂದ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಅಮೆರಿಕದ ಹಲವಾರು ಹಿರಿಯ ಸಂಸತ್ ಸದಸ್ಯರು ಮಾಡಿಕೊಂಡಿದ್ದ ಮನವಿಗಳನ್ನು ಅವರು ಕಿವಿಗೆ ಹಾಕಿಕೊಂಡಿಲ್ಲ.

ಟ್ರಂಪ್ ನಿರ್ಧಾರದಿಂದಾಗಿ ಅಮೆರಿಕದ ಉದ್ಯಮಗಳು ಪ್ರತಿವರ್ಷ 300 ಮಿ.ಡಾ.ಗೂ ಅಧಿಕ ಸುಂಕದ ಹೊರೆಯನ್ನು ಭರಿಸಬೇಕಾಗುತ್ತದೆ. ಜಿಎಸ್‌ಪಿ ಸೌಲಭ್ಯವಿಲ್ಲದೆ ಅಮೆರಿಕದ ಸಣ್ಣ ಉದ್ಯಮಗಳು ಹೊಸ ತೆರಿಗೆಯನ್ನು ಎದುರಿಸಬೇಕಾಗುತ್ತದೆ ಮತ್ತು ಇದು ಉದ್ಯೋಗ ನಷ್ಟ,ಹೂಡಿಕೆಗಳ ಹಿಂದೆಗೆತ ಮತ್ತು ಗ್ರಾಹಕರಿಗೆ ಬೆಲೆಏರಿಕೆಯ ಬಿಸಿಗೆ ಕಾರಣವಾಗುತ್ತದೆ. ಅಮೆರಿಕದ ರಫ್ತುಗಳಿಗೆ ತನ್ನ ಮಾರುಕಟೆಯಲ್ಲಿ ಪ್ರವೇಶ ಕಲ್ಪಿಸಲು ಮಾತುಕತೆಗೆ ಭಾರತವು ಸಿದ್ಧವಿದ್ದರೂ ಟ್ರಂಪ್ ಸರಕಾರವು ಈ ಕ್ರಮವನ್ನು ತೆಗೆದುಕೊಂಡಿದೆ. ಈ ನಿರ್ಧಾರದಿಂದ ಯಾರಿಗೂ ಲಾಭವಿಲ್ಲ. ಅಮೆರಿಕದ ಆಮದುದಾರರು ಹೆಚ್ಚಿನ ಬೆಲೆಯನ್ನು ತೆರುತ್ತಾರೆ ಮತ್ತು ರಫ್ತುದಾರರ ಪಾಲಿಗೆ ಭಾರತದಲ್ಲಿ ಮಾರುಕಟ್ಟೆ ಪ್ರವೇಶ ನಿರ್ಬಂಧಗಳು ಮುಂದುವರಿಯುತ್ತವೆ ಎಂದು ಜಿಎಸ್‌ಪಿ ಪರ ಕೂಟದ ಕಾರ್ಯಕಾರಿ ನಿರ್ದೇಶಕ ಡ್ಯಾನ್ ಆ್ಯಂಥನಿ ಅವರು ಹೇಳಿದ್ದಾರೆ.

ಜಿಎಸ್‌ಪಿ ಯೋಜನೆಯಡಿ ಅಮೆರಿಕದ ಕಾಂಗ್ರೆಸ್ ನಿಗದಿಗೊಳಿಸಿರುವ ಅರ್ಹತಾ ಮಾನದಂಡಗಳನ್ನು ಫಲಾನುಭವಿ ದೇಶಗಳು ಪೂರೈಸಿದರೆ ವಾಹನ ಬಿಡಿಭಾಗಗಳು ಮತ್ತು ಜವಳಿ ಸೇರಿದಂತೆ ಸುಮಾರು 2,000 ಸರಕುಗಳನ್ನು ಸುಂಕಮುಕ್ತವಾಗಿ ಅಮೆರಿಕದ ಮಾರುಕಟ್ಟೆಯನ್ನು ತಲುಪಿಸಬಹುದಾಗಿದೆ.

ಭಾರತವು 2017ರಲ್ಲಿ 5.7 ಶತಕೋಟಿ ವೌಲ್ಯದ ಸರಕುಗಳನ್ನು ಅಮೆರಿಕಕ್ಕೆ ಸುಂಕಮುಕ್ತವಾಗಿ ರಫ್ತು ಮಾಡುವ ಮೂಲಕ ಯೋಜನೆಯಡಿ ಅತ್ಯಂತ ದೊಡ್ಡ ಫಲಾನುಭವಿ ರಾಷ್ಟ್ರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News