ಗೂಗಲ್ ವಿರುದ್ಧ ತನಿಖೆಗೆ ಅಮೆರಿಕದ ಕಾನೂನು ಇಲಾಖೆ ಸಿದ್ಧತೆ?

Update: 2019-06-01 16:31 GMT

ವಾಶಿಂಗ್ಟನ್, ಜೂ. 1: ಗೂಗಲ್ ತನ್ನ ಬೃಹತ್ ಆನ್‌ಲೈನ್ ವ್ಯವಹಾರಗಳನ್ನು ನಿಭಾಯಿಸುವಾಗ ‘ಆ್ಯಂಟಿ ಟ್ರಸ್ಟ್’ ಕಾನೂನನ್ನು ಮುರಿದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಅಮೆರಿಕದ ಕಾನೂನು ಇಲಾಖೆ ಸಿದ್ಧತೆಗಳನ್ನು ನಡೆಸುತ್ತಿದೆ ಎಂಬುದಾಗಿ ಈ ಬಗ್ಗೆ ಮಾಹಿತಿ ಹೊಂದಿರುವ ಎರಡು ಮೂಲಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಗೂಗಲ್‌ಗೆ ಸಂಬಂಧಿಸಿ ಕಾನೂನು ವ್ಯಾಪ್ತಿಯನ್ನು ನಿಗದಿಪಡಿಸುವುದಕ್ಕಾಗಿ ಕಾನೂನು ಇಲಾಖೆಯ ಆ್ಯಂಟಿ ಟ್ರಸ್ಟ್ ವಿಭಾಗ ಮತ್ತು ಫೆಡರಲ್ ಟ್ರೇಡ್ ಕಮಿಶನ್‌ನ ಅಧಿಕಾರಿಗಳು ಇತ್ತೀಚಿನ ವಾರಗಳಲ್ಲಿ ಸಭೆ ಸೇರಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಸಂಭಾವ್ಯ ತನಿಖೆಯು ಟ್ರಂಪ್ ಆಡಳಿತವು ತಂತ್ರಜ್ಞಾನ ಕಂಪೆನಿಯೊಂದರ ಮೇಲೆ ನಡೆಸಲಿರುವ ಇನ್ನೊಂದು ದಾಳಿಯಾಗಲಿದೆ.

ಸಾಮಾಜಿಕ ಮಾಧ್ಯಮ ಕಂಪೆನಿಗಳು ಮತ್ತು ಗೂಗಲ್ ತಮ್ಮ ಆನ್‌ಲೈನ್ ವೇದಿಕೆಗಳಲ್ಲಿ ಕನ್ಸರ್ವೇಟಿವ್ ಧ್ವನಿಗಳನ್ನು ಹತ್ತಿಕ್ಕುತ್ತಿವೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಆರೋಪಗಳನ್ನು ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಗೂಗಲ್ ವಿರುದ್ಧದ ಸಂಭಾವ್ಯ ತನಿಖೆಯನ್ನು ತಾನು ನಿರಾಕರಿಸುವುದೂ ಇಲ್ಲ, ಖಚಿತಪಡಿಸುವುದೂ ಇಲ್ಲ ಎಂಬುದಾಗಿ ಕಾನೂನು ಇಲಾಖೆಯ ವಕ್ತಾರರೊಬ್ಬರು ಹೇಳಿದರು.

ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡಲು ಗೂಗಲ್ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News