ಅಮೆರಿಕದ ಸರಕುಗಳ ಮೇಲಿನ ಆಮದು ಸುಂಕ ಹೆಚ್ಚಿಸಿದ ಚೀನಾ

Update: 2019-06-01 16:38 GMT

ಬೀಜಿಂಗ್, ಜೂ. 1: ‘ವಿಶ್ವಾಸಾರ್ಹವಲ್ಲದ’ ವಿದೇಶಿ ಕಂಪೆನಿಗಳ ಕಪ್ಪು ಪಟ್ಟಿಯನ್ನು ಅನಾವರಣಗೊಳಿಸಲು ಸಿದ್ಧತೆಗಳನ್ನು ನಡೆಸುತ್ತಿರುವಂತೆಯೇ, ಚೀನಾ ಶನಿವಾರ ಅಮೆರಿಕದ ಬಿಲಿಯಗಟ್ಟಲೆ ಡಾಲರ್ ಮೌಲ್ಯದ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸಿದೆ.

ಚೀನಾದ ಟೆಲಿಕಾಮ್ ದೈತ್ಯ ವಾವೇಗೆ ಸಲಕರಣೆಗಳ ಪೂರೈಕೆಯನ್ನು ನಿಲ್ಲಿಸಿರುವ ಅಮೆರಿಕದ ಹಾಗೂ ಇತರ ವಿದೇಶಿ ಕಂಪೆನಿಗಳನ್ನು ಶಿಕ್ಷಿಸುವುದಕ್ಕಾಗಿ ಚೀನಾವು ಈ ಕಪ್ಪು ಪಟ್ಟಿಯನ್ನು ರಚಿಸುತ್ತಿದೆ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಈ ಕ್ರಮವು 60 ಬಿಲಿಯ ಡಾಲರ್ (ಸುಮಾರು 4.17 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಅಮೆರಿಕನ್ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ. ಚೀನಾ ಹೊಸದಾಗಿ ವಿಧಿಸಿರುವ ಸುಂಕವು 5ರಿಂದ 25 ಶೇಕಡವರೆಗೆ ಇದೆ.

200 ಬಿಲಿಯ ಡಾಲರ್ (ಸುಮಾರು 14 ಲಕ್ಷ ಕೋಟಿ ರೂಪಾಯಿ) ವೌಲ್ಯದ ಚೀನಾದ ಸರಕುಗಳ ಮೇಲಿನ ದಂಡನಾ ಸುಂಕವನ್ನು 25 ಶೇಕಡಕ್ಕೆ ಏರಿಸಲು ಅಮೆರಿಕ ತೆಗೆದುಕೊಂಡಿರುವ ಕ್ರಮಕ್ಕೆ ಪ್ರತೀಕಾರವಾಗಿ ಚೀನಾ ಈ ಕ್ರಮ ತೆಗೆದುಕೊಂಡಿದೆ.

ಚೀನಾ ಮತ್ತು ಅಮೆರಿಕಗಳ ನಡುವಿನ ವ್ಯಾಪಾರ ಸಮರದ ನಡುವೆಯೇ, ರಾಷ್ಟ್ರೀಯ ಭದ್ರತೆಯ ಕಾರಣವನ್ನು ನೀಡಿ ಚೀನಾದ ತಂತ್ರಜ್ಞಾನ ದೈತ್ಯ ವಾವೇಯನ್ನು ಅಮೆರಿಕ ಮೇ 16ರಂದು ಕಪ್ಪು ಪಟ್ಟಿಗೆ ಸೇರಿಸಿತು. ಇದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಕಪ್ಪು ಪಟ್ಟಿಗೆ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ, ತನ್ನ ಉಪಕರಣಗಳಿಗೆ ಅಗತ್ಯವಾಗಿರುವ ಅಮೆರಿಕದ ಕಂಪೆನಿಗಳ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲು ವಾವೇಗೆ ಸಾಧ್ಯವಾಗುವುದಿಲ್ಲ.

ಬಳಿಕ, 90 ದಿನಗಳ ವಿನಾಯಿತಿಯನ್ನು ಅಮೆರಿಕ ವಾವೇಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News