ಚಿಲ್ಲರೆ ವ್ಯಾಪಾರಿಗಳಿಗೆ ಮಾಸಿಕ ಪಿಂಚಣಿ ಐತಿಹಾಸಿಕ ನಿರ್ಧಾರ : ಅಮಿತ್ ಶಾ

Update: 2019-06-01 18:01 GMT

ಹೊಸದಿಲ್ಲಿ, ಜೂ.1: ಅಂಗಡಿ ಮಾಲಿಕರಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಮಾಸಿಕ ಪಿಂಚಣಿ ಒದಗಿಸುವ ಮೋದಿ ಸರಕಾರದ ಯೋಜನೆ ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಡವರು ಮತ್ತು ರೈತರ ಬಗ್ಗೆ ಯಾವಾಗಲೂ ಮೋದಿ ಸರಕಾರ ಆದ್ಯತೆ ನೀಡುತ್ತದೆ. ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸುವ ಪ್ರಯತ್ನವಾಗಿ ಮೋದಿ ಸರಕಾರ ಅಂಗಡಿ ಮಾಲಿಕರಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ, ಸ್ವಉದ್ಯೋಗಿಗಳಿಗೆ 60 ವರ್ಷವಾದ ಬಳಿಕ 3000 ಸಾವಿರ ರೂ. ಕನಿಷ್ಟ ಮಾಸಿಕ ಪಿಂಚಣಿ ಒದಗಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಅಲ್ಲದೆ ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಿದೆ. ಅಲ್ಲದೆ ಸಣ್ಣ ಮತ್ತು ಬಡ ರೈತರಿಗೆ ಪಿಂಚಣಿ ನೀಡುವ ಪ್ರಧಾನ ಮಂತ್ರಿ ಕಿಸಾನ್ ಪೆನ್ಷನ್ ಯೋಜನೆಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದವರು ಹೇಳಿದ್ದಾರೆ.

ಅಲ್ಲದೆ ರಾಷ್ಟ್ರೀಯ ರಕ್ಷಣಾ ನಿಧಿಯಡಿ ನೀಡಲಾಗುವ ಪ್ರಧಾನಮಂತ್ರಿ ಸ್ಕಾಲರ್‌ಶಿಪ್ ಯೋಜನೆಯಲ್ಲಿ ಪ್ರಮುಖ ಬದಲಾವಣೆಗೆ ಒಪ್ಪಿಗೆ ನೀಡಲಾಗಿದೆ. ಇದು ಯಾವುದೇ ವಿಷಮ ಪರಿಸ್ಥಿತಿಗೂ ಅಂಜದೆ ದೇಶದ ರಕ್ಷಣೆ ಮಾಡುವವರ ಕುರಿತು ಮೋದಿ ಸರಕಾರಕ್ಕೆ ಇರುವ ಸಂವೇದನಾಶೀಲತೆ ಹಾಗೂ ಬದ್ಧತೆಯ ದ್ಯೋತಕವಾಗಿದೆ ಎಂದು ಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News