ಭಾರತೀಯ ರಾಯಭಾರ ಕಚೇರಿಯ ಇಫ್ತಾರ್ ಕೂಟದ ಅತಿಥಿಗಳಿಗೆ ಪಾಕ್ ಕಿರುಕುಳ

Update: 2019-06-02 07:35 GMT

ಇಸ್ಲಾಮಾಬಾದ್/ಹೊಸದಿಲ್ಲಿ, ಜೂ.2: ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ಅತಿಥಿಗಳಿಗೆ ಪಾಕಿಸ್ತಾನದ ಅಧಿಕಾರಿಗಳು ಕಿರುಕುಳ ನೀಡಿ, ದರ್ಪದಿಂದ ವಾಪಸ್ ಕಳುಹಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ಭಾರತೀಯ ರಾಜತಾಂತ್ರಿಕರು ಆಪಾದಿಸಿದ್ದಾರೆ.

ಇಫ್ತಾರ್ ಕೂಟ ಆಯೋಜಿಸಲಾದ ಸೆರೇನಾ ಹೋಟೆಲ್‍ಗೆ ಮುತ್ತಿಗೆ ಹಾಕಿದ ಪಾಕಿಸ್ತಾನಿ ಅಧಿಕಾರಿಗಳು, ಸಮಾರಂಭಕ್ಕೆ ಆಗಮಿಸಿದ್ದ ನೂರಾರು ಮಂದಿ ಅತಿಥಿಗಳಿಗೆ ಕಿರುಕುಳ ನೀಡಿದರು ಎಂದು ಎಎನ್‍ಐ ವರದಿ ಮಾಡಿದೆ. ಅತಿಥಿಗಳನ್ನು ಬಲವಂತವಾಗಿ ವಾಪಸ್ ಕಳುಹಿಸಲಾಯಿತು ಎನ್ನಲಾಗಿದೆ.

"ನಿನ್ನೆ ನಡೆದ ಇಫ್ತಾರ್‍ ಕೂಟದಿಂದ ನಮ್ಮ ಅತಿಥಿಗಳನ್ನು ಆಕ್ರಮಣಕಾರಿಯಾಗಿ ವಾಪಾಸು ಕಳುಹಿಸಿದ್ದಕ್ಕೆ ನಾವು ಕ್ಷಮೆ ಯಾಚಿಸುತ್ತೇವೆ. ಇಂಥ ಬೆದರಿಕೆಯ ಕ್ರಮ ತೀರಾ ಅಸಮಾಧಾನಕರ" ಎಂದು ಪಾಕಿಸ್ತಾನದಲ್ಲಿ ಭಾರತೀಯ ಹೈಕಮಿಷನರ್ ಆಗಿರುವ ಅಜಯ್ ಬೈಸಾರಿಯಾ ಹೇಳಿದ್ದಾರೆ.

ಇಂತಹ ತಂತ್ರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ. "ಇದು ರಾಜತಾಂತ್ರಿಕ ನಡತೆಯ ಮತ್ತು ನಾಗರಿಕ ವರ್ತನೆಯ ಮೂಲ ತತ್ವಗಳ ಉಲ್ಲಂಘನೆ ಮಾತ್ರವಲ್ಲದೇ, ದ್ವಿಪಕ್ಷೀಯ ಸಂಬಂಧದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News