ದಲಿತ ಯುವಕನನ್ನು ವಿವಾಹವಾದ ಯುವತಿಗೆ ಮನೆಯವರಿಂದ ಗೃಹ ಬಂಧನ: ಆರೋಪ

Update: 2019-06-02 14:54 GMT

ಪಾಲಕ್ಕಾಡ್ (ಕೇರಳ), ಜೂ. 2: “ಕೆಳ ಜಾತಿಯ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ನನ್ನ ಪತ್ನಿಯ ಸಂಬಂಧಿಕರು ಆಕೆಯನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ” ಎಂದು 28ರ ಹರೆಯದ ದಲಿತ ವ್ಯಕ್ತಿಯೋರ್ವ ಆರೋಪಿಸಿದ್ದಾರೆ.

 ಪಾಲಕ್ಕಾಡ್ ಜಿಲ್ಲೆಯ ಪಟ್ಟಾಂಬಿ ನಿವಾಸಿಯಾಗಿರುವ ದಲಿತ ಯುವಕ ಶಾಜಿ ಟಿವಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ, ತಾನು ಈಳವ ಸಮುದಾಯದ ಯುವತಿಯನ್ನು ಮೇಯಲ್ಲಿ ವಿವಾಹವಾದೆ. ಈ ವಿವಾಹಕ್ಕೆ ಪತ್ನಿಯ ಕುಟುಂಬದಿಂದ ತೀವ್ರ ವಿರೋಧ ಇತ್ತು. ಅವರು ಯುವತಿ ಕಾಣೆಯಾಗಿರುವುದಾಗಿ ಪೊಲೀಸ್ ದೂರು ದಾಖಲಿಸಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ “ನನ್ನ ಪತಿ ನನ್ನೊಂದಿಗೆ ಜೀವಿಸುವುದಾಗಿ ಹೇಳಿಕೆ ನೀಡಿದ್ದಳು. ಈ ಹೇಳಿಕೆ ಆಧರಿಸಿ ಪೊಲೀಸರು ಆಕೆಯನ್ನು ನನ್ನೊಂದಿಗೆ ಕಳುಹಿಸಿಕೊಟ್ಟರು” ಎಂದಿದ್ದಾರೆ.

  “ಆದರೆ, ಕೂಡಲೇ ನನ್ನ ಪತ್ನಿಯನ್ನು ಆಕೆಯ ಕುಟುಂಬದವರು ಬಲವಂತದಿಂದ ಮನೆಗೆ ಕರೆದೊಯ್ದಿದ್ದಾರೆ. ಅನಂತರ ಗೃಹ ಬಂಧನದಲ್ಲಿ ಇರಿಸಿದ್ದಾರೆ. ಪತ್ನಿಯನ್ನು ಬಿಡುಗಡೆ ಮಾಡುವಂತೆ ಕೋರಿ ನಾನು ಪೊಲೀಸರನ್ನು ಸಂಪರ್ಕಿಸಿದ್ದೇನೆ. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದು ಶಾಜಿ ಆರೋಪಿಸಿದ್ದಾರೆ.

ಪ್ರಕರಣ ವಿವಾದಕ್ಕೊಳಗಾಗುತ್ತಿದ್ದಂತೆ ಕೇರಳ ಮಹಿಳಾ ಆಯೋಗ ರವಿವಾರ ಯುವತಿಯ ಸಂಬಂಧಿಕರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

 ‘‘ಮಾಧ್ಯಮ ವರದಿ ಆಧಾರದಲ್ಲಿ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ನಾವು ಮಹಿಳೆಯನ್ನು ಭೇಟಿಯಾಗಲಿದ್ದೇವೆ ಹಾಗೂ ಅವರ ಹೇಳಿಕೆ ದಾಖಲಿಸಿಕೊಳ್ಳಲಿದ್ದೇವೆ.’’ ಎಂದು ಮಹಿಳಾ ಆಯೋಗದ ಸದಸ್ಯ ಶಿಜಿ ಶಿವಾಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News