ಗುಂಪಿನಿಂದ ಥಳಿಸಿ ಹತ್ಯೆ ವಿರುದ್ಧ 5,000 ಜನರಿಂದ ಪ್ರತಿಭಟನೆ

Update: 2019-06-02 15:43 GMT

ರಾಂಚಿ,ಜೂ.2: ಜಾರ್ಖಂಡ್‌ನ ದುಮ್ರಿಯಲ್ಲಿ ಇತ್ತೀಚಿಗೆ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳನ್ನು ವಿರೋಧಿಸಿ ನಡೆದ ಅತ್ಯಂತ ದೊಡ್ಡ ಪ್ರತಿಭಟನೆಯಲ್ಲಿ 5,000ಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಎ.10ರಂದು ಜೈರಾಗಿ ಗ್ರಾಮದಲ್ಲಿ ಹೋರಿಯೊಂದನ್ನು ಕೊಂದ ಆರೋಪದಲ್ಲಿ ಗುಂಪೊಂದು ನೆರೆಯ,ಗುಮ್ಲಾದ ದುಮ್ರಿ ಬ್ಲಾಕ್‌ನ ಜುರ್ಮು ಗ್ರಾಮದ ಆದಿವಾಸಿ ಪ್ರಕಾಶ್ ಲಾಕ್ರಾ ಎಂಬಾತನನ್ನು ಥಳಿಸಿ ಹತ್ಯೆಗೈದಿತ್ತು. ಪೀರ್ ಕೆರ್ಕೆಟ್ಟಾ,ಬೆಲಾರಿಯಸ್ ಮಿಂಗೆ ಮತ್ತು ಜೆನೆರಿಯಸ್ ಮಿಂಝ್ ಎನ್ನುವವರು ಗುಂಪಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಸ್ಥಳೀಯ ಪೊಲೀಸರ ಪ್ರತಿಕ್ರಿಯೆಯ ಬಗ್ಗೆಯೂ ಪ್ರಶ್ನೆಗಳೆದ್ದಿವೆ.

ಗುಮ್ಲಾ,ರಾಂಚಿಯ ಜನರೊಂದಿಗೆ ದೂರದ ಲಾತೇಹಾರ್‌ನಿಂದಲೂ ಜನರು ಪ್ರತಿಭಟನೆಗೆ ಆಗಮಿಸಿದ್ದರು. ಲಾತೇಹಾರ್‌ನಲ್ಲಿ 2016,ಮಾರ್ಚ್‌ನಲ್ಲಿ ಅಕ್ರಮ ದನ ಸಾಗಣೆಯ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಥಳಿಸಿ ಕೊಂದಿದ್ದ ಗುಂಪು ಬಳಿಕ ಶವಗಳನ್ನು ಮರಕ್ಕೆ ನೇತು ಹಾಕಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜನಸಂಘರ್ಷ ಸಮಿತಿಯ ನಾಯಕರು ಮತ್ತು ರಾಜ್ಯದ ಇತರ ಮಾನವ ಹಕ್ಕು ಹೋರಾಟಗಾರರು,ಜುರ್ಮುದಲ್ಲಿ ಸತ್ತ ಹೋರಿಯ ಮಾಲಿಕ ಅದರ ಚರ್ಮವನ್ನು ಸುಲಿಯುವಂತೆ ಲಾಕ್ರಾ ಮತ್ತು ಇತರ ಗ್ರಾಮಸ್ಥರಿಗೆ ಸೂಚಿಸಿದ್ದ. ಅವರು ಆ ಕಾಯವನ್ನು ಮಾಡುತ್ತಿದ್ದಾಗ 35-40 ಜನರ ಗುಂಪು ಅವರ ಮೇಲೆ ದಾಳಿ ನಡೆಸಿದೆ. ಮೂರು ಗಂಟೆಗಳ ಕಾಲ ಅವರನ್ನು ಬರ್ಬರವಾಗಿ ಥಳಿಸಿದ್ದ ಗುಂಪು ಮಧ್ಯರಾತ್ರಿಯ ವೇಳೆಗೆ ದುಮ್ರಿ ಪೊಲೀಸ್ ಠಾಣೆಯೆದುರು ಎಸೆದು ಹೋಗಿತ್ತು. ಪೊಲೀಸರು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಬದಲು ಬಯಲಿನಲ್ಲಿಯೇ ಅವರನ್ನು ನಾಲ್ಕು ಗಂಟೆಗಳ ಕಾಲ ಕಾಯಿಸಿದ್ದರು.ಕೊನೆೆಗೂ ಆಸ್ಪತ್ರೆಗೆ ಸಾಗಿಸಿದಾಗ ಲಾಕ್ರಾ ಮೃತಪಟ್ಟಿದ್ದ ಎಂದು ಆರೋಪಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಜಾರ್ಖಂಡ್‌ನಲ್ಲಿ ಒಂಭತ್ತು ಮುಸ್ಲಿಮರು ಮತ್ತು ಇಬ್ಬರು ಆದಿವಾಸಿಗಳು ಸೇರಿದಂತೆ 11 ಜನರು ಗುಂಪು ದಾಳಿಯಿಂದ ಕೊಲ್ಲಲ್ಪಟ್ಟಿದ್ದಾರೆ. ಜುರ್ಮುದಲ್ಲಿ ನಡೆದಿರುವುದು ನೇರ ಕೊಲೆಯಾಗಿದೆ ಮತ್ತು ಇದು ಪೊಲೀಸರು ಮತ್ತು ರಾಜ್ಯಸರಕಾರದ ಕೃಪಾಕಟಾಕ್ಷದಿಂದಲೇ ನಡೆದಿದೆ. ಇಂತಹ ಘಟನೆಗಳು ಜಾರ್ಖಂಡ್ ಮಾತ್ರವಲ್ಲ,ದೇಶದ ಇತರ ಭಾಗಗಳಲ್ಲಿಯೂ ನಡೆಯುತ್ತಿವೆ. ಇದಕ್ಕೆ ಬಹುಶಃ ಹೆಚ್ಚುತ್ತಿರುವ ಹಿಂದುತ್ವ ಸಿದ್ಧಾಂತದ ಕಾವು ಕಾರಣವಾಗಿದೆ ಎಂದರು.

ಜುರ್ಮುದ ಆದಿವಾಸಿಗಳ ವಿರುದ್ಧ ಗೋಹತ್ಯೆಗಾಗಿ ದಾಖಲಾಗಿರುವ ಸುಳ್ಳು ಎಫ್‌ಐಆರ್ ರದ್ದುಗೊಳಿಸಬೇಕು,ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಮೃತ ಲಾಕ್ರಾನ ಕುಟುಂಬಕ್ಕೆ 15 ಲ.ರೂ.ಮತ್ತು ಗಾಯಾಳುಗಳಿಗೆ 10 ಲ.ರೂ.ಪರಿಹಾರ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ಸರಕಾರದ ಮುಂದಿರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News