ಸಂಯೋಜಿತ ರಕ್ಷಣಾ ಸಿಬ್ಬಂದಿ ಉಪಾಧ್ಯಕ್ಷರಾಗಿ ಅಜೇಂದ್ರ ಬಹದೂರ್ ಸಿಂಗ್ ನೇಮಕ

Update: 2019-06-02 15:41 GMT

ಹೊಸದಿಲ್ಲಿ, ಜೂ.2: ವೈಸ್ ಅಡ್ಮಿರಲ್ ಅಜೇಂದ್ರ ಬಹದೂರ್ ಸಿಂಗ್ ಮೇ 31ರಂದು ಸಂಯೋಜಿತ ರಕ್ಷಣಾ ಸಿಬ್ಬಂದಿ (ಡಾಕ್ಟ್ರೀನ್ ಆರ್ಗನೈಸೆಶನ್ ಟ್ರೈನಿಂಗ್)ಯ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಭಾರತೀಯ ನೌಕಾಪಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಸಿಂಗ್ ಅವರಿಗೆ 2011ರಲ್ಲಿ ವಿಶಿಷ್ಟ ಸೇವಾ ಪದಕ ಮತ್ತು 2016ರಲ್ಲಿ ಅತಿವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿದೆ. ಅವರು ಉತ್ತರ ಪ್ರದೇಶದ ಲಕ್ನೋದಲ್ಲಿರುವ ಯುಪಿ ಸೈನಿಕ ಶಾಲೆ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿದ್ದಾರೆ. ವೈಸ್ ಅಡ್ಮಿರಲ್ ಎ.ಬಿ ಸಿಂಗ್ ಅವರು ಭಾರತೀಯ ನೌಕಾಪಡೆಯ ಹಡಗುಗಳಾದ ವೀರ್ (ಕ್ಷಿಪಣಿ ಹಡಗು), ವಿಂದ್ಯಾಗಿರಿ, ತ್ರಿಶೂಲ್ (ಮಾರ್ಗದರ್ಶಕ ಕ್ಷಿಪಣಿ ಹಡಗು) ಮತ್ತು ವಿರಾಟ್ (ಯುದ್ಧವಿಮಾನ ಸಾಗಾಟ ಹಡಗು)ಗಳ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಅವರು ಕಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಹಾಗೂ ಕೊಚ್ಚಿಯ ಸಂಚರಣೆ ಮತ್ತು ದಿಕ್ಕು ನಿರ್ದೇಶನ ಶಾಲೆಯ ಮಾರ್ಗದರ್ಶಕರಾಗಿ ಮತ್ತು ವೆಲಿಂಗ್ಟನ್‌ನ ಡಿಎಸ್‌ಎಸ್‌ಸಿಯಲ್ಲಿ ಸಿಬ್ಬಂದಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಿಂಗ್ ಅವರು ನೌಕಾಪಡೆಯ ಮುಖ್ಯ ಕಚೇರಿಯಲ್ಲಿ ಉಪನಿರ್ದೇಶಕರಾಗಿ ಮತ್ತು ನೌಕಾಪಡೆ ಯೋಜನ ನಿರ್ದೇಶನಾಲಯದಲ್ಲಿ ಪ್ರಧಾನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಧಾನ ನಿರ್ದೇಶಕರಾಗಿ ಯುದ್ಧತಂತ್ರ, ಪರಿಕಲ್ಪನೆ ಮತ್ತು ಪರಿವರ್ತನೆ ನಿರ್ದೇಶನಾಲಯವನ್ನೂ ಸ್ಥಾಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News