×
Ad

ಮಾಂಸ ಸೇವಿಸಿದ ಆರೋಪದಲ್ಲಿ ಮುಸ್ಲಿಂ ಕಾರ್ಮಿಕರಿಗೆ ಥಳಿತ

Update: 2019-06-02 21:57 IST

ಬರೇಲಿ,ಜೂ.2: ಇಲ್ಲಿಯ ಗುಡಿಯೊಂದರ ಬಳಿ ಮಾಂಸವನ್ನು ಸೇವಿಸುತ್ತಿದ್ದ ಆರೋಪದಲ್ಲಿ ನಾಲ್ವರು ಕಾರ್ಮಿಕರನ್ನು ಅಪರಿಚಿತ ಯುವಕರ ಗುಂಪೊಂದು ಥಳಿಸಿದೆ.

ಯುವಕರು ಕಾರ್ಮಿಕರನ್ನು ಬೆಲ್ಟ್‌ಗಳಿಂದ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ.

ಬಹೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಕಾಮಗಾರಿಗಾಗಿ ಈ ಕಾರ್ಮಿಕರನ್ನು ಕರೆತರಲಾಗಿತ್ತು. ವಿರಾಮದ ವೇಳೆಯಲ್ಲಿ ಅವರು ಸಮೀಪದ ಮರವೊಂದರ ಕೆಳಗೆ ಕುಳಿತು ಊಟ ಮಾಡುತ್ತಿದ್ದು,ಅಲ್ಲಿಯೇ ಪುಟ್ಟಗುಡಿಯೊಂದಿತ್ತು. ಈ ವೇಳೆ ಆಗಮಿಸಿದ ಗುಂಪು ಪವಿತ್ರ ಸ್ಥಳದ ಬಳಿ ಮಾಂಸವನ್ನು ಸೇವಿಸುತ್ತಿರುವುದಾಗಿ ಆರೋಪಿಸಿ ಅವರನ್ನು ಥಳಿಸಿದ್ದಾರೆ.

ತಾವು ಸಸ್ಯಾಹಾರಿ ಊಟವನ್ನು ಮಾಡುತ್ತಿದ್ದಾಗಿ ಕಾರ್ಮಿಕರು ಸುದ್ದಿಗಾರರಿಗೆ ತಿಳಿಸಿದರು. ಈ ಕಾರ್ಮಿಕರ ಪೈಕಿ ಇಬ್ಬರು ಮುಸ್ಲಿಮರಾಗಿದ್ದು,ಇದು ಹಲ್ಲೆಗೆ ಪ್ರಚೋದನೆ ನೀಡಿರಬಹುದು ಎನ್ನಲಾಗಿದೆ.

ಆದೇಶ ವಾಲ್ಮೀಕಿ,ಮನೀಷ್ ಮತ್ತು ಇತರ ನಾಲ್ವರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು,ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಬರೇಲಿ ಎಸ್‌ಎಸ್‌ಪಿ ಮುನಿರಾಜ ಜಿ. ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News