×
Ad

ದಾಭೋಲ್ಕರ್ ಹತ್ಯೆ ಪ್ರಕರಣ: ಬಂಧಿತ ವಕೀಲ ಮತ್ತು ಆತನ ಸಹಾಯಕ ಸಹಕರಿಸುತ್ತಿಲ್ಲ

Update: 2019-06-02 22:01 IST

ಪುಣೆ,ಜೂ.2: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ವಕೀಲ ಸಂಜೀವ ಪುನಲೇಕರ್ ಮತ್ತು ಆತನ ಸಹಾಯಕ,ಸನಾತನ ಸಂಸ್ಥಾದ ಸದಸ್ಯ ವಿಕ್ರಮ ಭಾವೆ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಶನಿವಾರ ಇಲ್ಲಿಯ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ.ವಿ.ರೊಟ್ಟೆ ಅವರು ಉಭಯ ಆರೋಪಿಗಳ ಸಿಬಿಐ ಕಸ್ಟಡಿ ಅವಧಿಯನ್ನು ಜೂ.4ರವರೆಗೆ ವಿಸ್ತರಿಸಿದರು. ಹಿಂದು ವಿಧಿಜ್ಞಾ ಪರಿಷದ್‌ನ ಪದಾಧಿಕಾರಿ ಎನ್ನಲಾಗಿರುವ ಪುನಲೇಕರ್ ಪ್ರಕರಣದಲ್ಲಿಯ ಕೆಲವು ಆರೋಪಿಗಳನ್ನು ಪ್ರತಿನಿಧಿಸಿದ್ದ.

ಶೂಟರ್‌ಗಳ ಪೈಕಿ ಓರ್ವನಾಗಿರುವ ಶರದ್ ಕಲಾಸ್ಕರ್‌ಗೆ ಶಸ್ತ್ರಾಸ್ತ್ರವನ್ನು ನಾಶಗೊಳಿಸುವಂತೆ ಸೂಚಿಸುವ ಮೂಲಕ ಪುನಲೇಕರ್ ತನ್ನ ಮಿತಿಯನ್ನು ದಾಟಿದ್ದಾನೆ ಎಂದು ವಿಶೇಷ ಸರಕಾರಿ ಅಭಿಯೋಜಕ ಪ್ರಕಾಶ ಸೂರ್ಯವಂಶಿ ಅವರು ಆರೋಪಿಸಿದರು. ಕಲಾಸ್ಕರ್ ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಹತ್ಯೆಯಲ್ಲಿಯೂ ಭಾಗಿಯಾಗಿದ್ದ ಎಂದು ಶಂಕಿಸಲಾಗಿದೆ. ಪುನಲೇಕರನನ್ನು ವಿಧಿವಿಜ್ಞಾನ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು,ಅದರ ವರದಿಯಿನ್ನೂ ಬಂದಿಲ್ಲ ಎಂದು ಸೂರ್ಯವಂಶಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಭಾವೆ 200ರ ಥಾಣೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ದೋಷಿಯಾಗಿದ್ದಾನೆ ಎಂದು ತಿಳಿಸಿದ ಸಿಬಿಐ,ಆತ ಸಹಕರಿಸುತ್ತಿಲ್ಲವಾದ್ದರಿಂದ ದಾಭೋಲ್ಕರ್ ಹತ್ಯೆಗೆ ಬಳಕೆಯಾಗಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಹೇಳಿತು.

ಪುನಲೇಕರ್ ಮತ್ತು ಕಲಾಸ್ಕರ್ ನಡುವಿನ ಸಂವಹನ ನಿಜವೇ ಎಂದಿಟ್ಟುಕೊಂಡರೂ ಅದು ಓರ್ವ ವಕೀಲ ಮತ್ತು ಆತನ ಕಕ್ಷಿದಾರನ ನಡುವಿನ ಸಂವಹನವಾಗಿದೆ ಎಂದು ಹೇಳಿದ ಪುನಲೇಕರ್ ಪರ ವಕೀಲ ಸುಭಾಷ ಝಾ ಅವರು,ಬೇರೊಂದು ಪ್ರಕರಣದಲ್ಲಿ ಕರ್ನಾಟಕ ಪೊಲೀಸರಿಗೆ ಕಲಾಸ್ಕರ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯು ಪ್ರಸಕ್ತ ಪ್ರಕರಣದಲ್ಲಿ ತನ್ನ ಕಕ್ಷಿದಾರನ ಬಂಧನಕ್ಕೆ ಆಧಾರವಾಗುವುದಿಲ್ಲ ಎಂದು ವಾದಿಸಿದರು.

ಸಿಬಿಐ ಪ್ರಗತಿ ವರದಿಯನ್ನು ಪ್ರಶ್ನಿಸಿದ ಭಾವೆ ಪರ ವಕೀಲ ಘನಶ್ಯಾಮ ಉಪಾಧ್ಯಾಯ ಅವರು,ಮೇ 25ರಂದು ಆತನನ್ನು ಬಂಧಿಸಿದ ಬಳಿಕ ಆತನ ವಿರುದ್ಧ ದೋಷಾರೋಪಣೆ ಮಾಡುವ ಯಾವುದೇ ಸಾಕ್ಷವನ್ನು ಸಿಬಿಐ ಸಲ್ಲಿಸಿಲ್ಲ ಎಂದು ವಾದಿಸಿದರು. ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈಗ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಸಿಬಿಐ ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ನೆವ ಹೇಳುತ್ತಿದೆ ಎಂದರು.

2013ರಲ್ಲಿ ನಡೆದಿದ್ದ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ವೀರೇಂದ್ರ ತಾವ್ಡೆ,ಸಚಿನ್ ಅಂದುರೆ ಮತ್ತು ಕಲಾಸ್ಕರ್ ಸೇರಿದಂತೆ ಆರು ಜನರನ್ನು ಈವರೆಗೆ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News