ನಾವೇಕೆ ಬಾತ್ ರೂಮಿನಲ್ಲಿ ಹಾಡುತ್ತೇವೆ.....?

Update: 2019-06-02 17:30 GMT

ನಮ್ಮ ಧ್ವನಿ ಬೇರೆಯವರಿಗೆ ಹೇಗೇ ಕೇಳಲಿ,ನಮಗೆ ಮಾತ್ರ ಇಂಪಾಗಿಯೇ ಇರುತ್ತದೆ. ನಾವು ಚೆನ್ನಾಗಿಯೇ ಹಾಡುತ್ತೇವೆ ಎಂಬ ಭ್ರಮೆಯೂ ಇರುತ್ತದೆ ಎನ್ನಿ. ಒಂಟಿಯಾಗಿರುವ ಅವಕಾಶ ಸಿಕ್ಕಾಗಲೆಲ್ಲ ನಾವೆಲ್ಲ ಗುನುಗಲು ಆರಂಭಿಸುತ್ತೇವೆ ಮತ್ತು ಇದಕ್ಕೆ ಬಾಥ್‌ರೂಮಿಗಿಂತ ಹೆಚ್ಚು ಪ್ರಶಸ್ತ ಸ್ಥಳ ಬೇರೊಂದಿಲ್ಲ. ಕೆಲವೇ ಜನರು ಬಾತ್ ರೂಮಿನಲ್ಲಿ ಹಾಡುವ ತುಡಿತಕ್ಕೆ ಕಡಿವಾಣ ಹಾಕಬಲ್ಲರು. ಬಾತ್ ರೂಮ್ ನಮಗೆ ಅತ್ಯಂತ ಖಾಸಗಿ ವಾತಾವರಣವನ್ನು ಒದಗಿಸುತ್ತದೆ, ಅಲ್ಲದೇ ಸ್ನಾನ ಮಾಡುವುದು ಬಿಟ್ಟರೆ ಅಲ್ಲಿ ಬೇರೆ ಕೆಲಸವೂ ನಮಗಿರುವುದಿಲ್ಲ. ಅಂದ ಹಾಗೆ ನಾವು ಬಾಥ್‌ರೂಮ್‌ನಲ್ಲಿ ಹಾಡಲು ಕಾರಣವೇನು? ಬಾಥ್‌ರೂಮ್ ಬಾಗಿಲಿಗೆ ಚಿಲಕವಿಲ್ಲದಿರುವುದು ಕಾರಣ ಎನ್ನುವುದು ಹಳೆಯ ಜೋಕ್,ಅದನ್ನು ಬಿಟ್ಟುಬಿಡಿ.

ಬಾತ್ ರೂಮ್ ಗಾಯನದ ಬಗ್ಗೆಯೂ ಅಧ್ಯಯನಗಳು ನಡೆದಿವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಬಾತ್ ರೂಮಿನಲ್ಲಿ ಮೈಮೇಲೆ ಬಿಸಿನೀರು ಹಾಕಿಕೊಂಡಾಗ ಅಥವಾ ಶವರ್‌ನ ಕೆಳಗೆ ನಿಂತಾಗ ನಮ್ಮಲ್ಲಿ ಗಾಯಕ ಆವಿರ್ಭವಿಸಲು ಹಲವಾರು ಕಾರಣಗಳಿವೆ. ಮೈಮೇಲೆ ಬೆಚ್ಚಗಿನ ನೀರು ಬೀಳುತ್ತಿರುವಾಗ ಮತ್ತು ಯಾವುದೇ ವ್ಯತ್ಯಯಗಳಿಲ್ಲದೆ ನಮ್ಮ ಮನಸ್ಸು ನಿಚ್ಚಳವಾಗಿರುವಾಗ ನಮ್ಮ ಮಿದುಳು ನಮಗೆ ಹಿತಾನುಭವ ನೀಡುವ ಡೋಪ್‌ಮೈನ್ ಹಾರ್ಮೋನ್‌ನ್ನು ಬಿಡುಗಡೆಗೊಳಿಸುತ್ತದೆ ಮತ್ತು ಈ ಹಾರ್ಮೋನ್ ನಮ್ಮನ್ನು ಉಲ್ಲಾಸದ ಮೂಡ್‌ನಲ್ಲಿರಿಸುತ್ತದೆ.

ನಾವು ಹಾಡುತ್ತಿರುವಾಗ ಹೆಚ್ಚಿನ ಆಮ್ಲಜನಕವನ್ನೂ ಉಸಿರಾಡುತ್ತೇವೆ ಮತ್ತು ಇದು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಹಾಡುತ್ತಿರುವಾಗ ಉಸಿರಾಟದ ವಿಷಯದಲ್ಲಿ ಹೇಳುವುದಾದರೆ ಅದು ಹೆಚ್ಚುಕಡಿಮೆ ಧ್ಯಾನದಲ್ಲಿ ತೊಡಗಿಸಿಕೊಂಡಂತಿರುತ್ತದೆ.

ಇದು ನಾವು ಬಾತ್ ರೂಮಿನಲ್ಲಿ ನಾವೇಕೆ ಹಾಡಲು ಆರಂಭಿಸುತ್ತೇವೆ ಎನ್ನುವುದಕ್ಕೆ ವಿವರಣೆ ನೀಡಬಹುದು. ಆದರೆ ಅದನ್ನೇಕೆ ಮುಂದುವರಿಸುತ್ತೇವೆ? ಕೆಲವೊಮ್ಮೆ ಹಾಡಿನಲ್ಲಿ ಎಷ್ಟೊಂದು ತಲ್ಲೀನರಾಗಿರುತ್ತೇವೆ ಎಂದರೆ ಹೊರಗಿನಿಂದ ಯಾರಾದರೂ ಕರೆದರೂ ನಮಗೆ ಕೇಳುವುದಿಲ್ಲ. ಬಾತ್ ರೂಮ್‌ನ್ನೇ ನಾವು ರೆಕಾರ್ಡಿಂಗ್ ರೂಮ್ ಎಂದು ಭಾವಿಸಿರುತ್ತೇವೆ. ಇದಕ್ಕೂ ಕಾರಣವಿದೆ.....ಬಾತ್ ರೂಮಿಗೆ ಅಳವಡಿಸಿರುವ ಟೈಲ್‌ಗಳು ಶಬ್ದವನ್ನು ಹೀರಿಕೊಳ್ಳುವುದಿಲ್ಲ,ಅಂದರೆ ನಮ್ಮ ಹಾಡು ಅಲ್ಲಿ ಪ್ರತಿಧ್ವನಿಸುತ್ತದೆ. ಇದರಿಂದಾಗಿ ನಮ್ಮ ಗಾಯನ ಲಿವಿಂಗ್ ರೂಮ್‌ನಲ್ಲಿ ಅಥವಾ ಕಾರಿನಲ್ಲಿ ಹಾಡುವ ಸಂದರ್ಭಕ್ಕಿಂತ ಹೆಚ್ಚು ಸಮೃದ್ಧವಾಗಿ ಮತ್ತು ಆಳವಾಗಿ ಕೇಳುತ್ತಿರುತ್ತದೆ. ನಮ್ಮ ಹಾಡೇ ನಮಗೆ ಮುದ ನೀಡುತ್ತಿರುತ್ತದೆ ಮತ್ತು ನಾವು ಹಾಡುತ್ತಲೇ ಇರುತ್ತೇವೆ.

ಬಾತ್ ರೂಮಗಳು ಖಾಸಗಿತನ ಒದಗಿಸುವ ಬೂತ್‌ಗಳಂತೆಯೂ ಕೆಲಸ ಮಾಡುತ್ತವೆ. ನಾವು ಬಾತ್ ರೂಮ್ ಚಿಲಕ ಹಾಕಿಕೊಂಡ ಬಳಿಕ ನಿತ್ಯದ ಕೆಲಸವನ್ನೇ ಪುನರಾವರ್ತಿಸುತ್ತಿರುತ್ತೇವೆ,ಹೀಗಾಗಿ ಯೋಚಿಸುವಂಥದ್ದು ಏನೂ ಇರುವುದಿಲ್ಲ. ಇದು ಹಾಡುಗಳ ಸಾಲುಗಳನ್ನು ನೆನಪಿಸಿಕೊಳ್ಳಲು,ಯಾವುದೋ ಗಹನವಾದ ಸಮಸ್ಯೆಯನ್ನು ಭೇದಿಸಲು ಇತ್ಯಾದಿಗಳಿಗಾಗಿ ನಮ್ಮ ಮಿದುಳಿಗೆ ಮುಕ್ತ ಅವಕಾಶವನ್ನು ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News