ಕೊಹ್ಲಿಗೆ ಗಾಯದ ಭೀತಿ

Update: 2019-06-03 11:11 GMT

ಲಂಡನ್, ಜೂ.2: ದಕ್ಷಿಣ ಆಫ್ರಿಕ ವಿರುದ್ಧ ಜೂ.5 ರಂದು ನಡೆಯಲಿರುವ ಭಾರತದ ಮೊದಲ ಐಸಿಸಿ ವಿಶ್ವಕಪ್ ಪಂದ್ಯಕ್ಕಿಂತ ಮೊದಲು ನಾಯಕ ವಿರಾಟ್ ಕೊಹ್ಲಿ ಗಾಯದ ಭೀತಿಗೆ ಒಳಗಾಗಿದ್ದಾರೆ.

ಶನಿವಾರ ಸೌಥಾಂಪ್ಟನ್‌ನಲ್ಲಿ ನಡೆದ ತಂಡದ ತರಬೇತಿಯ ವೇಳೆ ಕೊಹ್ಲಿ ಬಲ ಹೆಬ್ಬೆರಳಿಗೆ ಗಾಯವಾಗಿದೆ. ನೆಟ್‌ನಲ್ಲಿ ಫೀಲ್ಡಿಂಗ್ ಅಭ್ಯಾಸ ನಡೆಸುವಾಗ ಗಾಯವಾಗಿದೆಯೇ? ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಐಸ್‌ನಿಂದ ತುಂಬಿರುವ ಗ್ಲಾಸ್‌ಗೆ ಕೊಹ್ಲಿ ತನ್ನ ಬೆರಳನ್ನು ಮುಳುಗಿಸಿದ್ದರು. ನೆಟ್ ಅಭ್ಯಾಸದ ಮುಗಿದ ಬಳಿಕ ಪೆವಿಲಿಯನ್‌ಗೆ ವಾಪಸಾಗಿದ್ದರು. ಇದಕ್ಕೂ ಮೊದಲು ತಂಡದ ಫಿಜಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹರ್ಟ್ ಕೊಹ್ಲಿ ಅವರಿಗೆ ದೀರ್ಘ ಸಮಯ ಚಿಕಿತ್ಸೆ ನೀಡಿದರು.

ಟೀಮ್ ಮ್ಯಾನೇಜ್‌ಮೆಂಟ್ ಈತನಕ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ದಕ್ಷಿಣ ಆಫ್ರಿಕ ವಿರುದ್ಧ ಬುಧವಾರ ಭಾರತ ತನ್ನ ಮೊದಲ ಪಂದ್ಯ ಆಡಲಿರುವ ಹಿನ್ನೆಲೆಯಲ್ಲಿ ಕೊಹ್ಲಿಗೆ ಆಗಿರುವ ಗಾಯ ಹೆಚ್ಚು ಗಮನ ಸೆಳೆದಿದೆ. ಭಾರತ ವಿಶ್ವಕಪ್‌ನಲ್ಲಿ ಆಡಲಿರುವ ಮೊದಲ ಪಂದ್ಯಕ್ಕೆ ಇನ್ನೂ 3 ದಿನ ಬಾಕಿ ಉಳಿದಿದ್ದು, ಗಾಯ ಗಂಭೀರವಾಗಿರದೇ ಇದ್ದರೆ ಸರಿಯಾದ ಸಮಯಕ್ಕೆ ಚೇತರಿಸಿಕೊಳ್ಳಬಹುದು.

ಬ್ಯಾಟಿಂಗ್ ಮಾಡುವಾಗ ಕೊಹ್ಲಿ ಹೆಬ್ಬೆರಳಿಗೆ ಚೆಂಡಿನ ಏಟು ತಾಗಿದೆ. ಈ ಹಂತದಲ್ಲಿ ಚಿಂತಿಸುವ ಅಗತ್ಯವಿಲ್ಲ ಎಂದು ತಂಡದ ಮೂಲಗಳು ಪಿಟಿಐಗೆ ತಿಳಿಸಿವೆ.

ಭಾರತ ಈಗಾಗಲೇ ಗಾಯದ ಸಮಸ್ಯೆ ಎದುರಿಸುತ್ತಿದ್ದು, ಕೊಹ್ಲಿ ಹೊಸ ಸೇರ್ಪಡೆ. ಮಧ್ಯಮ ಕ್ರಮಾಂಕದ ದಾಂಡಿಗ ಕೇದಾರ್ ಜಾಧವ್ ಭುಜನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆಲ್‌ರೌಂಡರ್ ವಿಜಯ ಶಂಕರ್ ಮೊಣಕೈಗೆ ಗಾಯವಾಗಿರುವ ಕಾರಣ ನ್ಯೂಝಿಲ್ಯಾಂಡ್ ವಿರುದ್ಧ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News