ಆಕ್ಸಿಜನ್ ಸಿಲಿಂಡರ್ ನೊಂದಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಲತೀಶಾ ಅನ್ಸಾರಿ

Update: 2019-06-02 18:19 GMT

ಹೊಸದಿಲ್ಲಿ, ಜೂ. 2: ಕೊಟ್ಟಾಯಂನ 24 ವರ್ಷದ ಯುವತಿಯೋರ್ವರು ಅಪರೂಪದ ಎಲುಬಿನ ತೊಂದರೆಯೊಂದಿಗೆ ಉಸಿರಾಟದ ಸಮಸ್ಯೆ ಇದ್ದರೂ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗೆ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಹಾಜರಾಗುವ ಮೂಲಕ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸು ಮಾಡಲು ಹೊರಟಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ ಇಲ್ಲಿ ರವಿವಾರ ನಡೆಸಿದ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗೆ ಲತೀಶಾ ಅನ್ಸಾರಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ವೀಲ್‌ಚೇರ್‌ನಲ್ಲಿ ಆಗಮಿಸಿದ್ದರು.

 ಲತೀಶಾ ಜನನದಿಂದ ಪೆಡಸು ಮೂಳೆಯ ಸಮಸ್ಯೆ (ಅಂದರೆ ಮೂಳೆ ಬೇಗ ಮುರಿಯುತ್ತದೆ) ಎದುರಿಸುತ್ತಿದ್ದಾರೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಉಸಿರಾಟದ ತೊಂದರೆಯನ್ನು ಕೂಡ ಎದುರಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆಗಾಗಿ ಅವರ ಜೊತೆಗೆ ಯಾವಾಗಲೂ ಆಕ್ಸಿಜನ್ ಸಿಲಿಂಡರ್‌ನ ಅಗತ್ಯ ಇದೆ.

ಲತೀಶಾರ ಅನಾರೋಗ್ಯದ ಕಾರಣಕ್ಕೆ ತಂದೆ ಅನ್ಸಾರಿ ಅವರೇ ಶಾಲೆಗೆ ಬಿಡುತ್ತಿದ್ದರು. ಅನ್ಸಾರಿ ಅವರು ಕೊಟ್ಟಾಯಂನ ಎರುಮಲಿ ಮೂಲದವರು.

‘‘ಪರೀಕ್ಷಾ ಕೇಂದ್ರಕ್ಕೆ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯಲು ಆಕೆಗೆ ಅನುಮತಿ ನೀಡಿದ ಕೊಟ್ಟಾಯಂನ ಜಿಲ್ಲಾಧಿಕಾರಿ ಪಿ.ಆರ್. ಸುಧೀರ್ ಬಾಬು ಅವರಿಗೆ ಧನ್ಯವಾದಗಳು’’ ಎಂದು ಅನ್ಸಾರಿ ಹೇಳಿದ್ದಾರೆ.

ಉಚಿತ ವೆಚ್ಚದಲ್ಲಿ ಅವರಿಗೆ ಸಾಗಿಸಲು ಸಾಧ್ಯವಾದ ಸಿಲಿಂಡರ್ ಅನ್ನು ಒದಗಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಸುಧೀರ್ ಬಾಬು ಹೇಳಿದ್ದಾರೆ.

 ‘‘ನಾನು ಕಳೆದ ಒಂದೂವರೆ ವರ್ಷದಿಂದ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಭರವಸೆ ನನಗಿದೆ’’ ಎಂದು ಲತೀಶಾ ಹೇಳಿದ್ದಾರೆ.

ಎಂಕಾಂ ಪೂರ್ಣಗೊಳಿಸಿರುವ ಲತೀಶಾ ಮಲೆಯಾಳಂವನ್ನು ಐಚ್ಛಿಕವಾಗಿ ತೆಗೆದುಕೊಂಡು ನಾಗರಿಕ ಸೇವಾ ಪರೀಕ್ಷೆ ಎದುರಿಸುತ್ತಿದ್ದಾರೆ.

ಲತೀಶಾ ಅವರಂತ ಐಎಎಸ್ ಆಕಾಂಕ್ಷಿಗಳಿಗೆ ಯುಪಿಎಸ್‌ಸಿ ಉತ್ತಮ ಸೌಲಭ್ಯ ನೀಡಬೇಕಾದ ಅಗತ್ಯ ಇದೆ. ಅವರಿಗೆ ಪ್ರತಿ ತಿಂಗಳಿಗೆ 25 ಸಾವಿರ ರೂಪಾಯಿ ವೈದ್ಯಕೀಯ ವೆಚ್ಚಕ್ಕೆ ಬೇಕಾಗುತ್ತದೆ ಎಂದು ಆನುವಂಶಿಕ ಅಸೌಖ್ಯತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಚಾರಿಟೆಬಲ್ ಸೊಸೈಟಿಯ ಲತಾ ನಾಯರ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News