×
Ad

ಕಾಂಟಾ ಕ್ವಾರ್ಟರ್ ಫೈನಲ್‌ಗೆ

Update: 2019-06-02 23:51 IST

ಪ್ಯಾರಿಸ್, ಜೂ.2: ಕ್ರೊಯೇಶಿ ಯದ ಡೊನ್ನಾ ವೆಕಿಕ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಬ್ರಿಟನ್‌ನ ನಂ.1 ಆಟಗಾರ್ತಿ ಜೊಹನ್ನಾ ಕಾಂಟಾ 2017ರ ಬಳಿಕ ಗ್ರಾನ್‌ಸ್ಲಾಮ್ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ ಸಾಧನೆ ಮಾಡಿದರು.

ಇಲ್ಲಿ ರವಿವಾರ ನಡೆದ ಫ್ರೆಂಚ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 26ನೇ ಶ್ರೇಯಾಂಕದ ಕಾಂಟಾ ಕ್ರೊಯೇಶಿಯದ ವೆಕಿಕ್‌ರನ್ನು 6-2, 6-4 ನೇರ ಸೆಟ್‌ಗಳಿಂದ ಮಣಿಸಿದರು. ಅಂತಿಮ-8ರ ಸುತ್ತಿನಲ್ಲಿ ಕಳೆದ ವರ್ಷದ ರನ್ನರ್ಸ್ ಅಪ್ ಸ್ಲೋಯಾನ್ ಸ್ಟೀಫನ್ಸ್ ಅಥವಾ 2016ರ ಚಾಂಪಿಯನ್ ಗಾರ್ಬೈನ್ ಮುಗುರುಝರನ್ನು ಎದುರಿಸಲಿದ್ದಾರೆ.

ಕಾಂಟಾ ಎರಡು ವರ್ಷಗಳ ಹಿಂದೆ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಆ ಟೂರ್ನಿಯಲ್ಲಿ ಸೆಮಿ ಫೈನಲ್ ತನಕ ತಲುಪಿದ್ದ ಅವರು ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 4ನೇ ಸ್ಥಾನಕ್ಕೆ ತಲುಪಿದ್ದರು.

ಕಳಪೆ ಪ್ರದರ್ಶನ ನೀಡಿದ ಕಾರಣ ರ್ಯಾಂಕಿಂಗ್‌ನಲ್ಲಿ ಕುಸಿತದ ಹಾದಿ ಹಿಡಿದಿದ್ದ ಕಾಂಟಾ ಕಳೆದ ತಿಂಗಳು ಇಟಾಲಿಯನ್ ಓಪನ್‌ನಲ್ಲಿ ಎರಡನೇ ಸ್ಥಾನ ಪಡೆದ ಕಾರಣ ಟೂರ್ನಿಯಲ್ಲಿ ಶ್ರೇಯಾಂಕ ಪಡೆದಿದ್ದಾರೆ.

28ರ ಹರೆಯದ ಕಾಂಟಾ ಪ್ಯಾರಿಸ್‌ನಲ್ಲಿ ಆಡಿದ ಕಳೆದ ನಾಲ್ಕು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು. ಮೊದಲ ಬಾರಿ ಅಂತಿಮ-4ರ ಸುತ್ತಿಗೇರಿದ ಮಾರ್ಟಿಕ್

ಕ್ರೊಯೇಶಿಯದ 31ನೇ ಶ್ರೇಯಾಂಕದ ಪೆಟ್ರಾ ಮಾರ್ಟಿಕ್ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ರವಿವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ಮಾರ್ಟಿಕ್ ಇಸ್ಟೋನಿಯದ ಕೈಯಾ ಕನೆಪಿ ಅವರನ್ನು 5-7, 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದರು. 28ರ ಹರೆಯದ ಮಾರ್ಟಿಕ್ ಪ್ಯಾರಿಸ್‌ನಲ್ಲಿ ಎರಡು ಸಹಿತ ಒಟ್ಟು 4 ಬಾರಿ ಪ್ರಮುಖ ಟೂರ್ನಿಯ ಅಂತಿಮ-16ರ ಸುತ್ತಿನ ಪಂದ್ಯಗಳಲ್ಲಿ ಸೋತಿದ್ದರು.

ಮಾರ್ಟಿಕ್ ಕ್ವಾರ್ಟರ್ ಫೈನಲ್‌ನಲ್ಲಿ ಝೆಕ್‌ನ 19ರ ಹರೆಯದ ಮಾರ್ಕೆಟಾ ವಂಡ್ರೌಸೊವಾರನ್ನು ಎದುರಿಸಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News