ಲ್ಯಾಬ್ ವರದಿಯ ಎಡವಟ್ಟು: ಕ್ಯಾನ್ಸರ್ ಇಲ್ಲದ ಮಹಿಳೆಗೆ ಕೀಮೋಥೆರಪಿ!

Update: 2019-06-03 08:12 GMT

ತಿರುವನಂತಪುರಂ, ಜೂ.3: ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಕೇರಳದ ಆಲಪ್ಪುಳ ಜಿಲ್ಲೆಯ ಮಹಿಳೆಯೊಬ್ಬರಿಗೆ ಕ್ಯಾನ್ಸರ್ ಇದೆ ಎಂಬ ತಪ್ಪಾದ ಲ್ಯಾಬ್ ವರದಿಯ ಆಧಾರದಲ್ಲಿ ವೈದ್ಯರು ಕೀಮೋಥೆರಪಿ ಚಿಕಿತ್ಸೆ ಆರಂಭಿಸಿದ ಘಟನೆ ವರದಿಯಾಗಿದೆ.

ಮೊದಲನೇ ಕೀಮೋಥೆರಪಿ ಚಿಕಿತ್ಸೆ ಪಡೆದ ಕೂಡಲೇ ಮಹಿಳೆ ರಜನಿಯವರಎಲ್ಲಾ ಕೂದಲೂ ಉದುರಿ ಹೋದ ನಂತರ ವೈದ್ಯರು ತಪಾಸಣೆ ನಡೆಸಿದಾಗ ಆಕೆಗೆ ವಾಸ್ತವವಾಗಿ ಕ್ಯಾನ್ಸರ್ ಇಲ್ಲ ಎಂದು ತಿಳಿದು ಬಂದಿತ್ತು. ರಾಜ್ಯ ಸರಕಾರ ಘಟನೆಯ ತನಿಖೆಗೆ ಜೂನ್ 2ರಂದು ಆದೇಶಿಸಿದೆ.

ಆಲಪ್ಪುಳ ಜಿಲ್ಲೆಯ 30ರ ಅಸುಪಾಸಿನ ವಯಸ್ಸಿನ ರಜನಿ ಟ್ಯೂಮರ್ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿದ್ದರು. ಬಯಾಪ್ಸಿಯ ನಂತರ ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆ ನಡೆಸಿದಾಗ ಆಕೆಗೆ ಕ್ಯಾನ್ಸರ್ ಇದೆಯೆಂಬ ವರದಿ ಬಂದಿತ್ತು. ಈ ವರದಿಯ ಆಧಾರದಲ್ಲಿ ಮೆಡಿಕಲ್ ಕಾಲೇಜು, ಕೊಟ್ಟಾಯಂನಲ್ಲಿ ಕೀಮೋಥೆರಪಿ ಚಿಕಿತ್ಸೆ ಆರಂಭಿಸಲಾಗಿತ್ತು.

ಮೊದಲನೇ ಕೀಮೋಥೆರಪಿ ಮುಕ್ತಾಯಗೊಂಡ ಕೂಡಲೇ ಮಹಿಳೆ ತನ್ನೆಲ್ಲಾ ಕೂದಲು ಕಳೆದುಕೊಂಡಾಗ ವೈದ್ಯರು ಆಕೆಯ ಬಯಾಪ್ಸಿ ಸ್ಯಾಂಪಲ್ ಅನ್ನು ಆಸ್ಪತ್ರೆಯ ಲ್ಯಾಬ್ ಹಾಗೂ ರಾಜ್ಯದ ಅತ್ಯುನ್ನತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾದ ರೀಜನ್ ಕ್ಯಾನ್ಸರ್ ಸೆಂಟರ್, ತಿರುವನಂತಪುರಂ ಇಲ್ಲಿಗೆ ಕಳಿಸಿದ್ದರು. ಆದರೆ ಎರಡೂ ವರದಿಗಳು ನೆಗೆಟಿವ್ ಆಗಿದ್ದವು.

ಇದನ್ನರಿತ ರಜನಿ ಆರೋಗ್ಯ ಸಚಿವೆಗೆ ದೂರು ನೀಡಿದ ತಕ್ಷಣ ತನಿಖೆಗೆ ಆದೇಶಿಸಲಾಗಿದೆ. ಕೊಟ್ಟಾಯಂ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಜೋಸ್ ಜೋಸೆಫ್ ಅವರಿಗೆ ಈ ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಸೂಚಿಸಿದ್ದಾರೆ. ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸದ್ಯದಲ್ಲಿಯೇ ಪ್ರೊಟೋಕಾಲ್ ಜಾರಿಗೊಳಿಸಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.

ವಿವಾದ ಬೆಳಕಿಗೆ ಬರುತ್ತಿದ್ದಂತೆಯೇ ರಜನಿಯವರ ಬಯಾಪ್ಸಿ ಮಾದರಿಯ ಪರೀಕ್ಷೆಯನ್ನು ಮೊದಲು ನಡೆಸಿದ್ದ ಲ್ಯಾಬ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತ್ತು ಎಂದು ಮಹಿಳೆ ಮಾದ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.

ಆದರೆ ವೈದ್ಯರು ಲ್ಯಾಬ್ ವರದಿಯ ಆಧಾರದಲ್ಲಿ ಚಿಕಿತ್ಸೆ ಆರಂಭಿಸಿದ್ದರಿಂದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವಾಗದು ಎಂದು ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ ಜಯಕುಮಾರ್ ಟಿ ಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News