13 ಮಂದಿಯಿದ್ದ ಭಾರತೀಯ ವಾಯುಪಡೆಯ ವಿಮಾನ ನಾಪತ್ತೆ

Update: 2019-06-03 16:39 GMT

ಹೊಸದಿಲ್ಲಿ,ಜೂ.3: ಸೋಮವಾರ ಮಧ್ಯಾಹ್ನ 12:25ಕ್ಕೆ ಅಸ್ಸಾಮಿನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾಕ್ಕೆ ಹಾರಾಟ ಆರಂಭಿಸಿದ್ದ ಭಾರತೀಯ ವಾಯುಪಡೆಯ ಅಂಟೊನೊವ್ ಎಎನ್-32 ಸಾರಿಗೆ ವಿಮಾನವು ನಾಪತ್ತೆಯಾಗಿದೆ.

ಎಂಟು ಸಿಬ್ಬಂದಿಗಳು ಮತ್ತು ಐವರು ಪ್ರಯಾಣಿಕರಿದ್ದ ವಿಮಾನವು ಮಧ್ಯಾಹ್ನ ಒಂದು ಗಂಟೆಯ ಬಳಿಕ ಸಂಪರ್ಕ ಕಳೆದುಕೊಂಡಿದೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ.

ನಾಪತ್ತೆಯಾಗಿರುವ ವಿಮಾನಕ್ಕಾಗಿ ವಾಯುಪಡೆಯು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಜೋರ್ಹಾಟ್‌ನಿಂದ ಮೆಚುಕಾದವರೆಗಿನ ಯಾನ ಮಾರ್ಗವು ಪರ್ವತಗಳು ಮತ್ತು ದಟ್ಟ ಅರಣ್ಯಗಳಿಂದ ಕೂಡಿದ ದುರ್ಗಮ ಪ್ರದೇಶದ ಮೂಲಕ ಹಾದು ಹೋಗುತ್ತದೆ. ಮೆಚುಕಾದಿಂದ ವಿಮಾನಗಳ ಹಾರಾಟ ಆರಂಭ ಮತ್ತು ಅಲ್ಲಿ ವಿಮಾನಗಳನ್ನು ಇಳಿಸುವುದು ಅತ್ಯಂತ ಕಷ್ಟಕರವಾಗಿದೆ.

ಎಎನ್-32 ರಷ್ಯ ನಿರ್ಮಿತ ಅವಳಿ ಇಂಜಿನ್‌ಗಳ ಟರ್ಬೊಪ್ರೊಪ್ ಸಾರಿಗೆ ವಿಮಾನವಾಗಿದ್ದು,ಕಳೆದ ನಾಲ್ಕು ದಶಕಗಳಿಗೂ ಹೆಚ್ಚಿನ ಸಮಯದಿಂದ ವಾಯುಪಡೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.

2016ರಲ್ಲಿ ಚೆನ್ನೈನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಕ್ಕೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನವೊಂದು ಬಂಗಾಳ ಕೊಲ್ಲಿಯ ಮೇಲೆ ಹಾರುತ್ತಿದ್ದಾಗ ನಾಪತ್ತೆಯಾಗಿತ್ತು. ಈ ವಿಮಾನವನ್ನು ಪತ್ತೆ ಹಚ್ಚಲು ಭಾರತದ ಇತಿಹಾಸದಲ್ಲಿಯೇ ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಆದರೆ ವಿಮಾನ ಮಾತ್ರ ಪತ್ತೆಯಾಗಿರಲಿಲ್ಲ ಮತ್ತು ಅದರಲ್ಲಿದ್ದ ಎಲ್ಲ 29 ಜನರೂ ಮೃತಪಟ್ಟಿದ್ದಾರೆ ಎಂದು ಪರಿಗಣಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News