ಹಿಂದಿ ಹೇರಿಕೆಯನ್ನು ಕೇಂದ್ರ ಕೈಬಿಟ್ಟಿರುವುದು ಕಲೈಙರ್ ಜೀವಂತವಿರುವುದಕ್ಕೆ ಸಾಕ್ಷಿ: ಡಿಎಂಕೆ

Update: 2019-06-03 14:45 GMT

ಚೆನ್ನೈ, ಜೂ.3: ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಮಸೂದೆಯಲ್ಲಿ ಹಿಂದಿ ಕಡ್ಡಾಯ ನಿಬಂಧನೆಯನ್ನು ಕೈಬಿಟ್ಟಿರುವ ಕೇಂದ್ರದ ನಡೆಯನ್ನು ಪ್ರಶಂಸಿಸಿರುವ ಡಿಎಂಕೆ, ಇದರಿಂದ ಕಲೈಙರ್ ಅಂದರೆ ಪಕ್ಷದ ನಾಯಕ ಎಂ. ಕರುಣಾನಿಧಿ ಅವರು ಜೀವಂತವಾಗಿದ್ದಾರೆ ಎನ್ನುವುದು ಸಾಬೀತಾಗಿದೆ ಎಂದು ತಿಳಿಸಿದೆ.

ಕೇಂದ್ರದ ಈ ನಡೆ ಹಿಂದಿ ಹೇರಿಕೆ ವಿರುದ್ಧ ಕರುಣಾನಿಧಿಯವರು ಮಾಡಿದ್ದ ಹೋರಾಟಕ್ಕೆ ಸಂದ ಜಯ ಎಂದೇ ಡಿಎಂಕೆ ವ್ಯಾಖ್ಯಾನಿಸಿದೆ. ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳಲ್ಲಿ ಹಿಂದಿಯನ್ನು ಕಲಿಸಬೇಕೆಂಬ ಮಾನವ ಸಂಪನ್ಮೂಲ ಸಚಿವಾಲಯದ ಸಲಹೆಯ ಹಿನ್ನೆಲೆಯಲ್ಲಿ ಉಂಟಾದ ವಿವಾದದ ಮಧ್ಯೆ ಸೋಮವಾರ ಬಿಡುಗಡೆಗೊಂಡ ಶಿಕ್ಷಣ ನೀತಿಯ ಪರಿಷ್ಕೃತ ಮಸೂದೆಯಲ್ಲಿ ಹಿಂದಿಯನ್ನು ಕಡ್ಡಾಯವೆಂಬ ಯಾವುದೇ ಉಲ್ಲೇಖವೂ ಇಲ್ಲ. ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು, ಸಂಸದರು ಮತ್ತು ಶಾಸಕರ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ನಾವು ನಮ್ಮ ನಾಯಕ ಕಲೈಙರ್ ಕರುಣಾನಿಧಿಯವರ ಜನ್ಮದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರಕಾರ ಹಿಂದಿ ಕಡ್ಡಾಯ ನಿಬಂಧನೆಯನ್ನು ತೆಗೆದು ಹಾಕಿರುವುದು ಅವರು ಈಗಲೂ ಜೀವಂತವಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಂದೇಶ ರವಾನಿಸಿರುವ ಡಿಎಂಕೆ, ಯಾವತ್ತೂ ತಮಿಳರ ಭಾವನೆಯ ಜೊತೆ ಆಟವಾಡಬೇಡಿ ಎಂದು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News