ಗೋಮಾಂಸ ಸೇವನೆಯನ್ನು ತಡೆಯುವುದು ಹಿಂಸೆಯ ಇನ್ನೊಂದು ರೂಪ ಎಂದಿದ್ದ ಗಾಂಧಿ: ಹೊಸ ಪುಸ್ತಕದಲ್ಲಿ ಬಹಿರಂಗ

Update: 2019-06-03 16:19 GMT

ಹೊಸದಿಲ್ಲಿ, ಜೂ.3: ಮಹಾತ್ಮಾ ಗಾಂಧಿ ಗೋಮಾಂಸ ಭಕ್ಷಣೆಯನ್ನು ಕಟುವಾಗಿ ವಿರೋಧಿಸಿರಬಹುದು. ಆದರೆ ಒಬ್ಬ ವ್ಯಕ್ತಿಯನ್ನು ಆತನ ಇಷ್ಟದ ಆಹಾರ ಸೇವಿಸದಂತೆ ತಡೆಯುವುದೂ ಹಿಂಸೆಗಿಂತ ಕಡಿಮೆಯಲ್ಲ ಎಂದು ಅವರು ಭಾವಿಸಿದ್ದರು ಎಂದು ಗಾಂಧಿ ಕುರಿತ ಹೊಸ ಪುಸ್ತಕ ಬಹಿರಂಗಪಡಿಸಿದೆ.

ಗಾಂಧಿ ಗೋಹತ್ಯೆಯನ್ನು ವಿರೋಧಿಸುತ್ತಿದ್ದರಾದರೂ ಮಾಂಸಾಹಾರಿಗಳ ಜೊತೆ ಅವರು ಮುಕ್ತವಾಗಿ ಬೆರೆಯುತ್ತಿದ್ದರು ಎಂದು ಅಮೆರಿಕ ಮೂಲದ ಇತಿಹಾಸತಜ್ಞ ನಿಕೊ ಸ್ಲೇಟ್ ಅವರು ತನ್ನ ‘ಗಾಂಧೀಸ್ ಸರ್ಚ್ ಫಾರ್ ದ ಪರ್ಫೆಕ್ಟ್ ಡಾಯಟ್’ ಪುಸ್ತಕದಲ್ಲಿ ಬರೆದಿದ್ದಾರೆ. “ನಾನು ಓರ್ವ ಸಸ್ಯಾಹಾರಿ ಮತ್ತು ಆಹಾರ ಸುಧಾರಣಾವಾದಿ ಎನ್ನುವುದು ಎಲ್ಲರಿಗೂ ಗೊತ್ತು. ಅಹಿಂಸೆ ಎನ್ನುವುದು ಮಾನವರಷ್ಟೇ ಕೆಳಹಂತದ ಪ್ರಾಣಿಗಳಿಗೂ ಅನ್ವಯವಾಗುತ್ತದೆ ಮತ್ತು ನಾನು ಮಾಂಸಾಹಾರಿಗಳ ಜೊತೆಯೂ ಮುಕ್ತವಾಗಿ ಬೆರೆಯುತ್ತೇನೆ ಎನ್ನುವುದೂ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯ” ಎಂದು ಗಾಂಧೀಜಿ ಹೇಳಿರುವುದನ್ನು ಸ್ಲೇಟ್ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಗಾಂಧಿಯ ಭಾರತದಲ್ಲಿ ಒಂದು ವಿಭಜನಾತ್ಮಕ ವಿಷಯವಾಗಿದ್ದ ಗೋಹತ್ಯೆ 2015ರಲ್ಲಿ ದಾದ್ರಿಯಲ್ಲಿ ಗೋಹತ್ಯೆಯ ಅನುಮಾನದಲ್ಲಿ 52ರ ಹರೆಯದ ಮುಹಮ್ಮದ್ ಅಖ್ಲಾಕ್ ಎಂಬವರನ್ನು ಗುಂಪು ಹತ್ಯೆ ನಡೆಸಿದ ನಂತರ ಸಂಘರ್ಷ ಸೃಷ್ಟಿಸುವ ವಿಷಯವಾಯಿತು. ಈ ಪುಸ್ತಕದ ಪ್ರಕಾರ, ಗಾಂಧಿ, ಗೋಹತ್ಯೆಯನ್ನು ತಡೆಯಲು ಹಿಂಸೆಯನ್ನು ಬಳಸುವುದನ್ನು ವಿರೋಧಿಸುವ ಜೊತೆಗೆ ಮುಸ್ಲಿಮರನ್ನು ಖಳರನ್ನಾಗಿ ಬಿಂಬಿಸಲು ಗೋರಕ್ಷಣೆಯನ್ನು ಬಳಸುವುದನ್ನೂ ವಿರೋಧಿಸಿದ್ದರು. ಓರ್ವ ವ್ಯಕ್ತಿ ತನ್ನಿಷ್ಟದ ಆಹಾರ ಸೇವಿಸದಂತೆ ತಡೆಯುವುದು ಹಿಂಸೆಯೇ ಹೊರತು ಅಹಿಂಸೆಯಲ್ಲ. ಅದು ಧರ್ಮವೂ ಅಲ್ಲ, ಬದಲಿಗೆ ಗೋವನ್ನು ರಕ್ಷಿಸಲು ಮುಸ್ಲಿಂ ಸಹೋದರನನ್ನು ಹತ್ಯೆ ಮಾಡಲು ಬಳಸುವ ಸಾಧನ ಎಂದು ಗಾಂಧಿ ತಿಳಿಸಿದ್ದರು.

ತಾನು ಯಾವುದೇ ಹಿಂದು ಅಥವಾ ಮುಸ್ಲಿಮರು ಮಾಂಸವನ್ನ ಬಳಸುವುದನ್ನು ನಾನು ನಿಷೇಧಿಸಿದ್ದೇನೆ ಎಂಬ ಹೇಳಿಕೆಗಳನ್ನೂ ಗಾಂಧಿ ನಿರಾಕರಿಸಿದ್ದರು ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News