×
Ad

ಭಾಷಣ ಬಿಗಿಯುವುದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗದು: ಕೇಂದ್ರಕ್ಕೆ ಕುಟುಕಿದ ಶಿವಸೇನೆ

Update: 2019-06-03 22:07 IST

ಮುಂಬೈ, ಜೂ.3: ಸರಕಾರದ ಇತ್ತೀಚಿನ ಅಂಕಿಂಶಗಳು ಅಭಿವೃದ್ಧಿ ದರ ತೀವ್ರವಾಗಿ ಕುಸಿಯುತ್ತಿರುವ ಮತ್ತು ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಬೆಳಕು ಚೆಲ್ಲಿರುವ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಬಿಕ್ಕಟ್ಟಿಗೆ ಶೀಘ್ರ ಪರಿಹಾರ ಕಂಡು ಹಿಡಿಯಬೇಕಿದೆ ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಹೇಳಿದೆ.

 ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವಂತೆ ಕಾಣುತ್ತಿದೆ. ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಒ) ಪ್ರಕಟಿಸಿದ ವರದಿಯಲ್ಲಿ 2017-18ರಲ್ಲಿ ನಿರುದ್ಯೋಗದ ಪ್ರಮಾಣ ಶೇ.6.1ಕ್ಕೆ ಹೆಚ್ಚಿರುವುದಾಗಿ ತಿಳಿಸಲಾಗಿದೆ. ಕಳೆದ 45 ವರ್ಷಗಳಲ್ಲೇ ಇದು ಅಧಿಕವಾಗಿದೆ. ಕೇವಲ ಭಾಷಣ ಬಿಗಿಯುವುದರಿಂದ ನಿರುದ್ಯೋಗ ಸಮಸ್ಯೆಯ ವಿರುದ್ಧ ಹೋರಾಡಲು ಆಗದು. ವಿತ್ತ ಸಚಿವರು ಇದಕ್ಕೆ ಶೀಘ್ರ ಪರಿಹಾರ ಕಂಡುಹಿಡಿಯಬೇಕು ಎಂದು ಪಕ್ಷದ ಮುಖವಾಣಿ ‘ಸಾಮ್ನ’ದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ತಿಳಿಸಲಾಗಿದೆ.

2015-16ರಲ್ಲಿ 37 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದವು. ಆದರೆ ಕೇವಲ 1.48 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಯಿತು. ಇದೇ ರೀತಿ 2017-18ರಲ್ಲಿ ಸುಮಾರು 23 ಲಕ್ಷ ಹುದ್ದೆಗಳು ಖಾಲಿಯಿದ್ದು ಕೇವಲ 9.21 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬ್ಯಾಂಕ್ ಹಾಗೂ ರೈಲ್ವೇ ಇಲಾಖೆಯ ನೇಮಕಾತಿ ಕೈಬಿಡಲಾಗಿದೆ. ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಸಂಸ್ಥೆಗಳು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಸಾರ್ವಜನಿಕ ಕ್ಷೇತ್ರದ ಹಲವು ಸಂಸ್ಥೆಗಳು ಬಾಗಿಲು ಮುಚ್ಚಿವೆ. ಕೆಲವು ಭಾರೀ ನಷ್ಟ ಎದುರಿಸಿವೆ. ಬಿಜೆಪಿ ಸರಕಾರದ ಕಳೆದ ಅವಧಿಯಲ್ಲಿ ನಿರ್ಮಿಸಲಾದ ಹಲವು ವಿಮಾನ ನಿಲ್ದಾಣಗಳು ಇನ್ನೂ ಪೂರ್ಣವಾಗಿ ಕಾರ್ಯಾಚರಿಸುತ್ತಿಲ್ಲ. ಕೃಷಿ ಕ್ಷೇತ್ರಕ್ಕೂ ಭಾರೀ ಹೊಡೆತ ಬಿದ್ದಿದೆ. ಕಳೆದ 5 ತಿಂಗಳಲ್ಲಿ ಮರಾಠಾವಾಡದಲ್ಲೇ ಸುಮಾರು 315 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನತೆಗೆ ಉದ್ಯೋಗ ಒದಗಿಸಿಕೊಡುವುದು ಸರಕಾರದ ಕರ್ತವ್ಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೇ 31ರಂದು ಪ್ರಕಟವಾದ ಎನ್‌ಎಸ್‌ಎಸ್‌ಒ ವರದಿಯಲ್ಲಿ 2018-19ರ ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಅಭಿವೃದ್ಧಿ ದರ ಶೇ.5.8ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News