ಮುಝಫ್ಫರ್‌ಪುರ ಆಶ್ರಯಧಾಮ ಪ್ರಕರಣ: 3 ತಿಂಗಳಲ್ಲಿ ವಿಚಾರಣೆ ಮುಗಿಸಲು ಸಿಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶ

Update: 2019-06-03 16:46 GMT

ಹೊಸದಿಲ್ಲಿ,ಜೂ.3: ಮುಝಫ್ಫರ್‌ಪುರ ಆಶ್ರಯಧಾಮ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಸಿಬಿಐಗೆ ನಿರ್ದೇಶ ನೀಡಿದೆ. ಸಿಬಿಐ ವಿಚಾರಣೆಯನ್ನು ಪೂರ್ಣಗೊಳಿಸಲು ಆರು ತಿಂಗಳ ಕಾಲಾವಕಾಶವನ್ನು ಕೋರಿತ್ತು.

ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳ ಮೇಲಿನ ಲೈಂಗಿಕ ಹಲ್ಲೆಗಳ ಚಿತ್ರೀಕರಣ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರಾ ಮತ್ತು ಎಂ.ಆರ್.ಶಾ ಅವರ ಪೀಠವು ಸಿಬಿಐಗೆ ಆದೇಶಿಸಿತು. ಆಶ್ರಯಧಾಮದಲ್ಲಿಯ ಬಾಲಕಿಯರಿಗೆ ಮತ್ತೇರಿಸುವ ಮದ್ದುಗಳನ್ನು ನೀಡಿ ಅವರ ಮೇಲೆ ಲೈಂಗಿಕ ಹಲ್ಲೆಗೆ ಅನುಕೂಲ ಕಲ್ಪಿಸಿದ್ದ ಹೊರಗಿನವರ ಪಾತ್ರದ ಬಗ್ಗೆಯೂ ತನಿಖೆ ನಡೆಸುವಂತೆ ಅದು ಸಿಬಿಐಗೆ ಸೂಚಿಸಿತು. ಮೂರು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ನಿರ್ದೇಶ ನೀಡಿತು.

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌ಸ್ ಬಿಹಾರದಲ್ಲಿಯ 110 ಆಶ್ರಯ ಧಾಮಗಳ ಆಡಿಟ್ ವರದಿಯನ್ನು ಸಲ್ಲಿಸಿದ ಬಳಿಕ 2018,ಎಪ್ರಿಲ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆಯು ಬೆಳಕಿಗೆ ಬಂದಿತ್ತು. ಆಡಿಟ್‌ಗೆ ಆದೇಶಿಸಿದ್ದ ರಾಜ್ಯ ಸರಕಾರವು ಮೇ 31ರಂದು 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

ಕನಿಷ್ಠ 34 ಹೆಣ್ಣುಮಕ್ಕಳಿಗೆ ಮತ್ತು ಬರಿಸಿ ಅವರ ಮೇಲೆ ಅತ್ಯಾಚಾರವೆಸಗಲಾಗಿತ್ತು. ಮುಖ್ಯ ಆರೋಪಿ ಬೃಜೇಶ ಠಾಕೂರ್ ಅಶ್ಲೀಲ ಹಾಡುಗಳಿಗೆ ಕುಣಿಯುವಂತೆ ಮತ್ತು ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಾಲಕಿಯರನ್ನು ಬಲವಂತಗೊಳಿಸುತ್ತಿದ್ದ ಎಂದು ಸಿಬಿಐ ಡಿಸೆಂಬರ್‌ನಲ್ಲಿ ಸಲ್ಲಿಸಿರುವ ತನ್ನ ದೋಷಾರೋಪಣೆ ಪಟ್ಟಿಯಲ್ಲಿ ಹೇಳಿದೆ. ಠಾಕೂರ್‌ನನ್ನು ಪ್ರಸ್ತುತ ಪಂಜಾಬಿನ ಅತ್ಯಂತ ಬಿಗುಭದ್ರತೆಯ ಜೈಲಿನಲ್ಲಿರಿಸಲಾಗಿದೆ.

ಈ ವರ್ಷದ ಫೆಬ್ರುವರಿಯಲ್ಲಿ ಪ್ರಕರಣದಲ್ಲಿಯ ಐವರು ಸಾಕ್ಷಿಗಳು ಸೇರಿದಂತೆ ಏಳು ಬಾಲಕಿಯರು ಮೊಕಾಮಾದಲ್ಲಿಯ ಸರಕಾರಿ ಮಕ್ಕಳ ಆಶ್ರಮದಿಂದ ನಾಪತ್ತೆಯಾಗಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ಇವರನ್ನು ಮುಝಫ್ಫರ್‌ಪುರದಿಂದ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News