ನಿತೀಶ್ ಕುಮಾರ್ ರ ಎರಡನೇ ವಿಶ್ವಾಸದ್ರೋಹಕ್ಕೆ ಸಿದ್ಧವಿರಿ: ಬಿಜೆಪಿಗೆ ಖುಷ್ವಾಹಾ ಎಚ್ಚರಿಕೆ

Update: 2019-06-03 16:53 GMT

ಪಾಟ್ನಾ,ಜೂ.3: ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ತನ್ನ ಮಿತ್ರಪಕ್ಷ ಬಿಜೆಪಿಗೆ ವಿಶ್ವಾಸದ್ರೋಹ ಮಾಡಲಿದ್ದಾರೆ ಎಂದು ರಾಷ್ಟ್ರೀಯ ಲೋಕಸಮತಾ ಪಕ್ಷದ ವರಿಷ್ಠ ಉಪೇಂದ್ರ ಖುಷ್ವಾಹಾ ಅವರು ಹೇಳಿದ್ದಾರೆ.

ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜನಾದೇಶವನ್ನು ಅಗೌರವಿಸುವುದರಲ್ಲಿ ನಿತೀಶ್ ಕುಖ್ಯಾತರಾಗಿದ್ದಾರೆ ಎನ್ನ್ನುವುದನ್ನು ಬಿಜೆಪಿಗೆ ತಿಳಿಸಲು ತಾನು ಬಯಸುತ್ತೇನೆ. ಜನಾದೇಶಕ್ಕೆ ಮತ್ತು ಮೈತ್ರಿ ಪಾಲುದಾರರಿಗೆ ದ್ರೋಹವೆಸಗುವುದು ಅವರ ಹಳೆಯ ಚಟಗಳಾಗಿವೆ. ‘ಧೋಖಾ ನಂ.2’ಕ್ಕೆ ಸಾಕ್ಷಿಯಾಗಲು ಬಿಜೆಪಿ ಸಿದ್ಧವಾಗಿರಬೇಕು. ನಿತೀಶ್ ಅವರಿಂದ ವಂಚನೆಗೊಳಗಾಗದ ಯಾವುದೇ ವ್ಯಕ್ತಿಯಿಲ್ಲ ಎಂದು ಹೇಳಿದರು.

ನಿತೀಶ್ ರವಿವಾರ ಎಂಟು ಹೊಸ ಸಚಿವರನ್ನು ನೇಮಿಸಿಕೊಳ್ಳುವ ಮೂಲಕ ತನ್ನ ಸಂಪುಟವನ್ನು ವಿಸ್ತರಿಸಿದ್ದಾರೆ. ಈ ಎಲ್ಲ ಎಂಟು ಜನರು ಜೆಡಿಯುಗೆ ಸೇರಿದವರಾಗಿದ್ದಾರೆ. ಮಿತ್ರಪಕ್ಷ ಬಿಜೆಪಿಗೆ ಒಂದು ಸ್ಥಾನದ ಕೊಡುಗೆಯನ್ನು ಅವರು ನೀಡಿದ್ದರಾದರೂ,ಅದನ್ನು ಸ್ವೀಕರಿಸದಿರಲು ಅದು ನಿರ್ಧರಿಸಿದೆ.

ಕಳೆದ ವಾರ ಬಿಜೆಪಿ ನೇತೃತ್ವದ ಸರಕಾರವು ನೂತನ ಕೇಂದ್ರ ಸಂಪುಟದಲ್ಲಿ ತನಗೆ ಕೇವಲ ಒಂದು ಸಚಿವ ಸ್ಥಾನವನ್ನು ನೀಡಿದಾಗ ಜೆಡಿಯು ಸಂಪುಟವನ್ನು ಸೇರದಿರಲು ನಿರ್ಧರಿಸಿತ್ತು.

ಮೋದಿ ಸಂಪುಟವನ್ನು ಸೇರದಿರುವ ನಿತೀಶ್ ನಿರ್ಧಾರ ತನಗೆ ‘ಹುಳಿ ದಾಕ್ಷಿ’ಯನ್ನು ನೆನಪಿಸಿದೆ ಎಂದು ಖುಷ್ವಾಹಾ ಹೇಳಿದರು.

ಖುಷ್ವಾಹಾ ಅವರ ಆರ್‌ಎಲ್‌ಎಸ್‌ಪಿ ಬಿಜೆಪಿಯ ಮಾಜಿ ಮಿತ್ರಪಕ್ಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News