ಐಸಿಐಸಿಐ ವಿಡಿಯೋಕಾನ್ ಪ್ರಕರಣ: ಕೊಚ್ಚಾರ್ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಕೋರ್ಟ್
ಹೊಸದಿಲ್ಲಿ, ಜೂ.3: ಐಸಿಐಸಿಐ-ವೀಡಿಯೊಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ಜಾರಿಗೊಳಿಸಿರುವ ಲುಕೌಟ್ ಸರ್ಕ್ಯುಲರ್ ರದ್ದುಗೊಳಿಸುವಂತೆ ಕೋರಿ ರಾಜೀವ್ ಕೊಚ್ಚಾರ್ ಸಲ್ಲಿಸಿದ್ದ ಅರ್ಜಿಯ ಕುರಿತ ತೀರ್ಪನ್ನು ವಿಶೇಷ ನ್ಯಾಯಾಲಯ ಕಾಯ್ದಿರಿಸಿದೆ.
ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ ಭಾವನಾಗಿರುವ ರಾಜೀವ್ ಕೊಚ್ಚಾರ್ ತನಿಖೆಗೆ ಸಹಕರಿಸುತ್ತಿದ್ದಾರೆ. ಯಾವಾಗ ಕರೆ ಬಂದರೂ ಅವರು ವಿಚಾರಣೆಗೆ ಹಾಜರಾಗುತ್ತಾರೆ ಎಂದು ರಾಜೀವ್ ಕೊಚ್ಚಾರ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ರಾಜೀವ್ ಕೊಚ್ಚಾರ್‌ರನ್ನು ಇನ್ನಷ್ಟು ತನಿಖೆ ನಡೆಸಬೇಕಿದೆ ಎಂದು ಜಾರಿ ನಿರ್ದೇಶನಾಲಯ ಪರ ವಕೀಲರು ಅರ್ಜಿಯನ್ನು ವಿರೋಧಿಸಿದರು. ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಅವರ ಸಹೋದರನಾಗಿರುವ ರಾಜೀವ್ ಕೊಚ್ಚಾರ್ ಬಳಿ ಐಸಿಐಸಿಐ-ವಿಡಿಯೋಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದ್ದು, ರಾಜೀವ್‌ರನ್ನು ಎಪ್ರಿಲ್ 30ರಿಂದ ಮೇ 2ರವರೆಗೆ ವಿಚಾರಣೆ ನಡೆಸಿತ್ತು. ತನ್ನ ವಿರುದ್ಧ ದಾಖಲಾಗಿರುವ ಲುಕೌಟ್ ಸರ್ಕ್ಯುಲರ್ ರದ್ದುಗೊಳಿಸಬೇಕೆಂದು ಕೋರಿ ಮೇ 15ರಂದು ರಾಜೀವ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
2009ರಿಂದ 2011ರ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್ ವೀಡಿಯೊಕಾನ್ ಸಮೂಹ ಸಂಸ್ಥೆಗೆ 1,875 ಕೋಟಿ ರೂ. ಸಾಲ ಬಿಡುಗಡೆಗೊಳಿಸಿರುವ ಪ್ರಕರಣದಲ್ಲಿ ಅವ್ಯವಹಾರ ಮತ್ತು ಅಕ್ರಮ ನಡೆದಿದೆ ಎಂಬ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.