×
Ad

ಕಳೆದ 24 ಗಂಟೆಗಳಲ್ಲಿ ವಿಶ್ವದ 15 ಅತಿ ಹೆಚ್ಚಿನ ತಾಪಮಾನದ ಸ್ಥಳಗಳಲ್ಲಿ 8 ಭಾರತದಲ್ಲಿದ್ದವು

Update: 2019-06-03 22:29 IST

ಹೊಸದಿಲ್ಲಿ,ಜೂ.3: ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ತಾಪಮಾನವಿದ್ದ 15 ಸ್ಥಳಗಳ ಪೈಕಿ ಎಂಟು ಭಾರತದಲ್ಲಿ ಮತ್ತು ಏಳು ನೆರೆಯ ಪಾಕಿಸ್ತಾನದಲ್ಲಿದ್ದವು ಎಂದು ಹವಾಮಾನ ನಿಗಾ ಜಾಲತಾಣ ಎಲ್ ಡೊರಾಡೋ ತನ್ನ ವರದಿಯಲ್ಲಿ ತಿಳಿಸಿದೆ.

ರಾಜಸ್ಥಾನದ ಚುರು ಸೋಮವಾರ 48.9 ಡಿ.ಸೆ.ನಷ್ಟು ಅತ್ಯಧಿಕ ತಾಪಮಾನವನ್ನು ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

ಚುರುದಲ್ಲಿ ಉಷ್ಣ ಮಾರುತ ಎಚ್ಚರಿಕೆಯನ್ನು ಹೊರಡಿಸಿದ್ದು,ಸರಕಾರಿ ಆಸ್ಪತ್ರೆಗಳು ಎಮರ್ಜನ್ಸಿ ವಾರ್ಡ್‌ಗಳನ್ನು ಹೆಚ್ಚುವರಿ ಏರ್ ಕಂಡಿಷನರ್‌ಗಳು,ಕೂಲರ್‌ಗಳು ಮತ್ತು ಔಷಧಿಗಳಿಂದ ಸನ್ನದ್ಧಗೊಳಿಸಿವೆ ಎಂದು ಚುರು ಹೆಚ್ಚುವರಿ ಜಿಲ್ಲಾಧಿಕಾರಿ ರಾಮರತನ್ ಸೋಂಕಾರಿಯಾ ತಿಳಿಸಿದರು.

ಥಾರ್ ಮರುಭೂಮಿಗೆ ಹೆಬ್ಬಾಗಿಲು ಎಂದು ಹೆಸರಾಗಿರುವ ಚುರುದಲ್ಲಿ ಬಿಸಿಲಿನ ಕಾವನ್ನು ತಗ್ಗಿಸಲು ಮತ್ತು ಡಾಂಬರ್ ಕರಗದಿರಲು ರಸ್ತೆಗಳ ಮೇಲೆ ನೀರು ಸುರಿಯಲಾಗುತ್ತಿದೆ ಎಂದರು.

ರಾಜಸ್ಥಾನದ ಸಿಖಾರ್‌ನಲ್ಲಿ ರವಿವಾರ ರೈತನೋರ್ವ ಬಿಸಲಿನ ಝಳದಿಂದ ಸಾವನ್ನಪ್ಪಿದ್ದಾನೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ರವಿವಾರ ತಾಪಮಾನ 44.6 ಡಿ.ಸೆ.ಇತ್ತು. ತನ್ನ ಡೆಲಿವರಿ ಬಾಯ್‌ಗಳನ್ನು ಒಂದು ಗ್ಲಾಸ್ ತಣ್ಣೀರಿನೊಂದಿಗೆ ಬರ ಮಾಡಿಕೊಳ್ಳುವಂತೆ ಆಹಾರ ಪೂರೈಕೆ ಆ್ಯಪ್ ರೊಮಾಟೊ ಗ್ರಾಹಕರನ್ನು ಕೋರಿಕೊಂಡಿತ್ತು.

ಸೋಮವಾರ ಪಶ್ಚಿಮ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವೆಡೆಗಳಲ್ಲಿ ಉಷ್ಣ ಮಾರುತ ಎಚ್ಚರಿಕೆಗಳನ್ನು ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News