ಅಜಿತ್ ದೋವಲ್ ಸೇವಾವಧಿ ವಿಸ್ತರಣೆ: ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ

Update: 2019-06-03 17:11 GMT

ಹೊಸದಿಲ್ಲಿ, ಜೂ.3: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಾರ್ಯಾವಧಿಯನ್ನು ಮತ್ತೆ 5 ವರ್ಷಕ್ಕೆ ವಿಸ್ತರಿಸಲಾಗಿದ್ದು ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಭದ್ರತೆಯ ಕಾರ್ಯಕ್ಷೇತ್ರದಲ್ಲಿ ದೋವಲ್ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಕ್ಯಾಬಿನೆಟ್ ದರ್ಜೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿಯಾಗಿ ನರೇಂದ್ರ ಮೋದಿ ದ್ವಿತೀಯ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಗೃಹ ಸಚಿವರಾಗಿ ಅಮಿತ್ ಶಾ ನೇಮಕಗೊಂಡಿದ್ದು, ಈ ಹಿಂದಿನ ಸಂಪುಟಲದಲ್ಲಿ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್‌ಗೆ ರಕ್ಷಣಾ ಖಾತೆ ದೊರಕಿತ್ತು. ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಹುದ್ದೆಯಲ್ಲಿ ಮುಂದುವರಿಯುವ ಬಗ್ಗೆ ಊಹಾಪೋಹ ಕೇಳಿ ಬಂದಿತ್ತು.

1968ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ದೋವಲ್ ತಮ್ಮ ಸೇವಾವಧಿಯ ಬಹುಪಾಲು ಗುಪ್ತಚರ ಇಲಾಖೆಯಲ್ಲೇ ಕಳೆದಿದ್ದರು. ಪುಲ್ವಾಮಾದಲ್ಲಿ ಭಯೋತ್ಪಾದಕರ ಆತ್ಮಾಹುತಿ ದಾಳಿಯ ಬಳಿಕ ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತದ ವಾಯುಪಡೆ ನಡೆಸಿದ್ದ ವಾಯುದಾಳಿ, 2016ರಲ್ಲಿ ಉರಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ನಡೆದ ಸರ್ಜಿಕಲ್ ದಾಳಿಗಳಲ್ಲಿ ದೋವಲ್ ನಿರ್ಣಾಯಕ ಪಾತ್ರ ವಹಿಸಿದ್ದರು. ಭಾರತದ ಮೂರು ಹಂತದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಗೆ ಪ್ರಧಾನಿ ಮುಖ್ಯಸ್ಥರಾಗಿರುತ್ತಾರೆ. ಇದರ ಜೊತೆಗೆ ವ್ಯೆಹಾತ್ಮಕ ಕಾರ್ಯನೀತಿ ತಂಡ ಹಾಗೂ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಇದೆ. ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News