ವಿಜ್ಞಾನ - ಸಂಶೊಧನೆಯಲ್ಲಿ ಕೊಡುಗೆ ನೀಡುವ ತಲೆಮಾರನ್ನು ಬೆಳೆಸಬೇಕು: ಅಝಾದ್ ಮನ್ಸೂರ್

Update: 2019-06-04 12:58 GMT

ವಿಜ್ಞಾನ - ಸಂಶೋಧನೆ ಮತ್ತು ಅಧ್ಯಯನದ ಕುರಿತು ಆಸಕ್ತಿ ಮೂಡಿಸಿ ರಾಷ್ಟ್ರಕ್ಕೆ ಕೊಡುಗೆ ನೀಡುವ ತಲೆಮಾರನ್ನು ಬೆಳೆಸುವುದು ಮತ್ತು ಅದಕ್ಕೆ ಬೇಕಾದ ಸೌಲಭ್ಯಗಳನ್ನು ವಿಸ್ತರಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಕೊರತೆ - ಕೊರಗು ಮತ್ತು ಕೂಗುಗಳನ್ನು ಮರೆತು ಭವಿಷ್ಯದ ಕನಸು - ಕಾಳಜಿ ಮತ್ತು ಕಾರ್ಯ ಯೋಜನೆಗಳ ಬಗ್ಗೆ ಹೆಚ್ಚು ದುಡಿಯಲು ನಾವು ಸಂಕಲ್ಪ ಮಾಡಬೇಕು ಎಂದು ಹಿದಾಯ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಮನ್ಸೂರ್ ಅಹ್ಮದ್ ಅಝಾದ್ ಹೇಳಿದ್ದಾರೆ.

ಅವರು ಈದ್ ಸಂದೇಶವನ್ನು ನೀಡುತ್ತಾ, ಭಾರತದ ಮುಸ್ಲಿಮರು ತಮ್ಮನ್ನು ದೇಶವೇ ಅಭಿಮಾನ ಪಡುವ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡು ಮಾನವೀಯ ಮೌಲ್ಯ- ಮಾನವ ಕಲ್ಯಾಣ - ರಾಷ್ಟ್ರದ ಹಿತಾಸಕ್ತಿಗಳ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ದುಡಿಯಬೇಕು ಎಂದು ಹೇಳಿದರು.

ಕರಾವಳಿಯ ಮುಸ್ಲಿಮರು ಇಂದು ವೈದ್ಯರಾಗಿ ಆರೋಗ್ಯ ಕ್ಷೇತ್ರದ ಸೇವೆಗೆ ಬರುತ್ತಿದ್ದಾರೆ ಮತ್ತು ಪೈಲಟ್, ಐಎಎಸ್, ಐಪಿಎಸ್, ಸಿಎ, ಲಾಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.  ಶೇ. 100 ಸಾಕ್ಷರತೆ ಇರುವ ಈ ಸಮುದಾಯ ಕಳೆದ 20 ವರ್ಷದಲ್ಲಿ ಕ್ರಾಂತಿಕಾರಕ ಬದಲಾವಣೆ ಕಂಡಿದೆ.

ಒಂದು ಕಾಲದಲ್ಲಿ ಗೋಲ್ ಗುಂಬಝ್ ನ ಕಥೆ ಹೇಳಿ ಅಭಿಮಾನ ಪಡುತ್ತಿದ್ದ ನಾವು ನಮ್ಮದೇ ಸಮುದಾಯದ ಜನರ ಇಚ್ಚಾಶಕ್ತಿ ಮತ್ತು ಪರಿಶ್ರಮದ ಫಲವಾಗಿ ಶಿಕ್ಷಣ ಯುನಿವರ್ಸಿಟಿಯನ್ನು, ಇಂಜಿನಿಯರಿಂಗ್ ಕಾಲೇಜನ್ನು ರಾಜ್ಯಕ್ಕೆ ಕೊಡುಗೆ ನೀಡಿದ್ದೇವೆ. ಆಸ್ಪತ್ರೆಗಳು, ನೂರಾರು ಸಮಾಜಸೇವಾ ಸಂಸ್ಥೆಗಳನ್ನು ಕಟ್ಟಿ ಮಂಗಳೂರಿನ ಅಭಿವೃದ್ದಿಗೆ ದೊಡ್ಡ ಕೊಡುಗೆ ನೀಡುತ್ತಾ, ಹಲವಾರು ಶಾಪಿಂಗ್ ಮಾಲ್ ಗಳು, ಕರ್ಮರ್ಶಿಯಲ್ ಮತ್ತು ರೆಸಿಡೆಂನ್ಸಿಯಲ್ ಕಾಂಪ್ಲೆಕ್ಸ್ ಕಟ್ಟಿ ಈ ನಾಡನ್ನು ಆರ್ಥಿಕವಾಗಿ ಬೆಳೆಸಿದ್ದೇವೆ.  

ಜಿಲ್ಲೆಯಲ್ಲಿ ಎಲ್ಲಾ ಧರ್ಮೀಯರು ಅವರ ಮೂಲಕ ಈ ಜಿಲ್ಲೆಯ ಅಭಿವೃದ್ದಿಗೆ ಕೊಡುಗೆ ನೀಡುತ್ತಾ ನಾವೆಲ್ಲಾ ಸಹೋದರರಾಗಿ ಬದುಕುತ್ತಿದ್ದೇವೆ.  ಉಧ್ಯಮ - ವ್ಯವಹಾರ ಕ್ಷೇತ್ರದಲ್ಲಿ ಜಿಲ್ಲೆಯ ಪ್ರಗತಿಗೆ ಅತೀ ಹೆಚ್ಚು ಕೊಡುಗೆ ನೀಡಿದ್ದೇವೆ, ದೇಶದ ಆರ್ಥಿಕ ಶಕ್ತಿಯನ್ನು ಬಲಪಡಿಸಲು ರಪ್ತು ಮತ್ತು ಆಮದು ವ್ಯಾಪಾರದಲ್ಲಿ ಬಲು ದೊಡ್ಡ ಪಾಲು ನೀಡಿದ್ದೇವೆ. ಈ ಎಲ್ಲಾ ಸಾಧನೆ ಮತ್ತು ಕೊಡುಗೆಗಳ ಸ್ಪೂರ್ತಿ ಪಡೆದು ನಾವು ದೇಶದಲ್ಲಿ ಮಾದರೀ ಸಮುದಾಯವಾಗಿ ಬೆಳೆಯಬೇಕು ಎಂದ  ಅಝಾದ್ ಮನ್ಸೂರ್, ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ - ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪ್ರತೀಯೊಂದು ಧರ್ಮಿಯರಲ್ಲೂ ಸೌಹಾರ್ದತೆ ಬೆಳೆಸಿ ಜಿಲ್ಲೆಯನ್ನು ಶಾಂತಿ- ಪ್ರೀತಿಯ ತೋಟವಾಗಿಸಲು ನಾವೆಲ್ಲ ಶ್ರಮಿಸಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದಾಯಕ್ಕೆ ಹಲವು ಸಾವಲುಗಳಿವೆ ಮತ್ತು ಸಮಸ್ಯೆಗಳು ಇದೆ. ಅದನ್ನು ಪರಸ್ಪರ ಸಮನ್ವಯತೆ ಸಾಧಿಸಿ ನಾವು ನಿವಾರಿಸಬೇಕಾ ಗಿದೆ. ಶಿಕ್ಷಣದಲ್ಲಿ ಗಂಭೀರವಾದ ಸವಾಲುಗಳಿದೆ. ಧಾರ್ಮಿಕ ಶಿಕ್ಷಣದಲ್ಲಿ ಬಲು ದೊಡ್ಡ ಕೊರತೆ ಇದೆ. ಭವಿಷ್ಯದ ಯುವ ಪೀಳಿಗೆಯಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಕಠಿಣ ಪರಿಶ್ರಮವಿದೆ. ಆರೋಗ್ಯ ಮತ್ತು ಬಡತನದ ಕಾರಣಗಳನ್ನು ನಿವಾರಿಸಲು ಅಮೂಲಾಗ್ರ ಸುಧಾರಣೆಯ ಅನಿವಾರ್ಯತೆ ಇದೆ. ಅದಕ್ಕಾಗಿ ಚಿಂತಿಸುವ ಮೆದುಳು- ಕಾಳಜಿ ತೋರಿಸುವ ಮನಸು ಮತ್ತು ದುಡಿಯುವ ಸೇವಕರ ಅಗತ್ಯವೂ ಇದೆ.

ಸೋಶಿಯಲ್ ಮೀಡಿಯಾದಿಂದ ಹೊರಗೆ ಒಂದು ಸಮಾಜವಿದೆ. ಮನೆಯಿಂದ ಹೊರಗೆ ಒಂದು ಸವಾಲಿನ ದಾರಿ ಇದೆ. ಆ ಸಮಾಜ ಮತ್ತು ದಾರಿಯಲ್ಲಿ ನಾವು ಹೆಜ್ಜೆ ಹಾಕಬೇಕು. ಅಲ್ಲಿರುವ ಸಮಸ್ಯೆ ಮತ್ತು ಸವಾಲನ್ನು ಗುರಿತಿಸಿ ನಿವಾರಿಸುವ ದೂರದೃಷ್ಟಿಯ ಪ್ರಯತ್ನಗಳು ನಮ್ಮಿಂದ ಆಗಬೇಕು ಎಂದು ಅಝಾದ್ ಮನ್ಸೂರ್ ಹೇಳಿದರು.

ನಾವು ಕುತ್ಬು ಮಿನಾರ್ ಕಟ್ಟಿದ್ದು ಹೇಳಿದಂತೆ ನಾಳೆ ನಾವು ಸಾವಿರಾರು ಯುವಕರಿಗೆ ಉದ್ಯೋಗ ಕೊಡಲು ಕಟ್ಟಿದ ಐಟಿ ಪಾರ್ಕ್ ಬಗ್ಗೆಯೂ ಅಭಿಮಾನ ಪಡಬೇಕು. ಟಿಪ್ಪು ಸುಲ್ತಾನ್ ಕಂಡು ಹಿಡಿದ ಮಿಸೈಲ್ ಬಗ್ಗೆ ಹೇಳುವಂತೆ ನಾವು ವಿಜ್ಞಾನಕ್ಕೆ ಕೊಟ್ಟ ಕೊಡುಗೆಗಳನ್ನು ಜಗತ್ತಿಗೆ ವಿವರಿಸುವಂತಾಗಬೇಕು. ಸಂಶೋಧನೆ ಮತ್ತು ಅಧ್ಯಯನದ ಮೂಲಕ ಅಬ್ದುಲ್ ಕಲಾಂ ರಂತಹ ವ್ಯಕ್ತಿತ್ವವನ್ನು ನಾವು ರೂಪಿಸಬೇಕು. ಇದಕ್ಕಾಗಿ ನಾವು ವಿಶಾಲ ಮನಸ್ಥಿಯನ್ನು ಹಾಗೇ ಭಯ ಮುಕ್ತ ಇಚ್ಚಾಶಕ್ತಿಯನ್ನು ಹೊಂದಬೇಕು. ನಮ್ಮಿಂದ ಸಾಧ್ಯವಿದೆ ಎಂಬ ಸಂಕಲ್ಪ ಮತ್ತು ಅದಕ್ಕಾಗಿ ಕಠಿಣ ತ್ಯಾಗ ಸಹಿಸುವುದಕ್ಕೆ ನಾನು ನಿಮ್ಮೊಂದಿಗಿದ್ದೇನೆ ಎಂದ ಅವರು ನಾಡಿನ ಜನತೆಗೆ ಈದುಲ್ ಫಿತ್ರ್ ಸುಖ - ಶಾಂತಿ- ನೆಮ್ಮದಿ - ಸಮೃದ್ಧಿ - ಅಭಯ ಮತ್ತು ಅವಕಾಶಗಳನ್ನು ಉಂಟು ಮಾಡಲಿ ಎಂದು ಮನ್ಸೂರ್ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News