ಪೌರತ್ವ ಪ್ರಶ್ನೆ: ರಾಹುಲ್ ಗೆ ನೀಡಿದ ನೋಟಿಸ್ ವಿವರ ಕೇಳಿದ್ದಕ್ಕೆ ಕೇಂದ್ರ ಉತ್ತರಿಸಿದ್ದು ಹೀಗೆ…

Update: 2019-06-04 14:45 GMT

ಹೊಸದಿಲ್ಲಿ, ಜೂ.4: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ದೂರಿನ ಹಿನ್ನೆಲೆಯಲ್ಲಿ ರಾಹುಲ್‌ಗೆ ಜಾರಿಗೊಳಿಸಿರುವ ನೋಟಿಸ್‌ನ ವಿವರ ಬಹಿರಂಗಪಡಿಸಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.

ತನಿಖೆಗೆ ಅಡಚಣೆಯಾಗುವ ಸಾಧ್ಯತೆಯಿರುವ ಮಾಹಿತಿ ಬಹಿರಂಗಗೊಳಿಸುವುದಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ವಿನಾಯಿತಿ ನೀಡಲಾಗಿದೆ ಎಂದು ಗೃಹ ಇಲಾಖೆ ಸ್ಪಷ್ಟಪಡಿಸಿದೆ. ರಾಹುಲ್ ಗಾಂಧಿ ಯಾವ ದೇಶದ ಪೌರತ್ವ ಹೊಂದಿದ್ದಾರೆ ಎಂದು ಪ್ರಶ್ನಿಸಿ ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಾಸ್ತವಿಕ ಸ್ಥಾನದ ಬಗ್ಗೆ 15 ದಿನದೊಳಗೆ ಸ್ಪಷ್ಟನೆ ನೀಡುವಂತೆ ಗೃಹ ಇಲಾಖೆಯು ರಾಹುಲ್ ಗಾಂಧಿಗೆ ನೋಟಿಸ್ ಜಾರಿಗೊಳಿಸಿದೆ.

ಈ ನೋಟಿಸ್‌ನ ವಿವರ ಬಹಿರಂಗಗೊಳಿಸಬೇಕೆಂದು ಕೋರಿ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿಕೆ ಸಲ್ಲಿಸಿದ್ದರು. 2003ರಲ್ಲಿ ಬ್ರಿಟನ್‌ನಲ್ಲಿ ನೋಂದಣಿಯಾಗಿರುವ ಬ್ಯಾಕಪ್ಸ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ ರಾಹುಲ್ ಗಾಂಧಿ ಕೂಡಾ ನಿರ್ದೇಶಕರಾಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. 2005 ಮತ್ತು 2006ರಂದು ಈ ಸಂಸ್ಥೆ ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರದಲ್ಲಿ ರಾಹುಲ್ ಗಾಂಧಿಯವರ ಜನ್ಮ ದಿನಾಂಕವನ್ನು ಜೂನ್ 19, 1970 ಎಂದು ತಿಳಿಸಲಾಗಿದೆ ಮತ್ತು ರಾಷ್ಟ್ರೀಯತೆ ಕಾಲಂನ ಎದುರು ಬ್ರಿಟನ್ ಎಂದು ನಮೂದಿಸಿರುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ.

  ಅಲ್ಲದೆ 2009ರ ಫೆ.17ರಂದು ಸಂಸ್ಥೆಯನ್ನು ವಿಸರ್ಜಿಸಲಾಗಿದ್ದು ಈ ಪತ್ರದಲ್ಲೂ ನಿಮ್ಮ ರಾಷ್ಟ್ರೀಯತೆಯನ್ನು ಬ್ರಿಟನ್ ಎಂದು ನಮೂದಿಸಲಾಗಿದೆ. ಆದ್ದರಿಂದ 15 ದಿನದೊಳಗೆ ವಾಸ್ತವಿಕ ಸ್ಥಿತಿಯನ್ನು ತಿಳಿಸಬೇಕು ಎಂದು ಗೃಹ ಇಲಾಖೆ ರಾಹುಲ್‌ಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News