ಕಾಂಗ್ರೆಸ್ ತೊರೆದ ಮಹಾರಾಷ್ಟ್ರದ ಹಿರಿಯ ನಾಯಕ ವಿಖೆ ಪಾಟೀಲ್
ಮುಂಬೈ,ಜೂ.4: ಬಿಜೆಪಿಯನ್ನು ಸೇರಲಿದ್ದಾರೆ ಎನ್ನಲಾಗಿರುವ ಮಹಾರಾಷ್ಟ್ರದ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಮಂಗಳವಾರ ವಿಧ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಸುಮಾರು 10 ಕಾಂಗ್ರೆಸ್ ಶಾಸಕರು ಪಾಟೀಲ್ ಅವರನ್ನು ಅನುಸರಿಸಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ.
ಕಾಂಗ್ರೆಸ್ ಈ ಸಾಧ್ಯತೆಯನ್ನು ತಳ್ಳಿಹಾಕಿದೆಯಾದರೂ ಇಂತಹ ಬೆಳವಣಿಗೆಯು ನವೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಆ ಪಕ್ಷಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಬಹುದು.
ಬಿಜೆಪಿಯು ಪಾಟೀಲ್ ಅವರಿಗೆ ಸಚಿವ ಸ್ಥಾನದ ಭರವಸೆಯನ್ನು ನೀಡಿದೆ ಎಂದು ಬೆಳವಣಿಗೆಯನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿವೆ. ಪಾಟೀಲ್ ಅವರ ಪುತ್ರ ಸುಜಯ ವಿಖೆ ಪಾಟೀಲ್ ಈಗಾಗಲೇ ಬಿಜೆಪಿಗೆ ಸೇರ್ಪಡೆಗೊಂಡು ಇತ್ತೀಚಿನ ಚುನಾವಣೆಯಲ್ಲಿ ಅಹ್ಮದ್ ನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಅಹ್ಮದ್‌ನಗರ ಲೋಕಸಭಾ ಕ್ಷೇತ್ರದಲ್ಲಿ ತನ್ನ ಮನಿಗೆ ಟಿಕೆಟ್ ನೀಡದೆ ಮಿತ್ರಪಕ್ಷ ಎನ್‌ಸಿಪಿಗೆ ಬಿಟ್ಟುಕೊಟ್ಟಿದ್ದರಿಂದ ಮುನಿಸಿಕೊಂಡಿದ್ದ ಪಾಟೀಲ್ ಕಳೆದ ಎಪ್ರಿಲ್‌ನಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಹ್ಮದ್ ನಗರದಲ್ಲಿ ಎನ್‌ಸಿಪಿ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡುವ ಮೂಲಕ ತಾನು ಬಿಜೆಪಿಗೆ ಸೇರುವ ಸುಳಿವು ನೀಡಿದ್ದರು.