ಪ್ರಮುಖ ಸಂಪುಟ ಸಮಿತಿಯಲ್ಲಿ ರಾಜನಾಥ್ ಸಿಂಗ್ ಹೆಸರಿಲ್ಲ!: 8 ಸಂಪುಟ ಸಮಿತಿಗಳಲ್ಲಿ ಅಮಿತ್ ಶಾ

Update: 2019-06-06 07:12 GMT

ಹೊಸದಿಲ್ಲಿ, ಜೂ.6: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ಘೋಷಿಸಿರುವ ಎಲ್ಲಾ ಎಂಟು ಪ್ರಮುಖ ಸಂಪುಟ ಸಮಿತಿಗಳಲ್ಲಿ ಗೃಹ ಸಚಿವ ಅಮಿತ್ ಶಾ ಇದ್ದರೆ,  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವುಗಳಲ್ಲಿ ಕೇವಲ ಎರಡು ಸಮಿತಿಗಳ ಭಾಗವಾಗಿರುವುದು ಅಚ್ಚರಿ ಹುಟ್ಟಿಸಿದೆ. ಉಳಿದಂತೆ ಪ್ರಧಾನಿ ಆರು ಸಮಿತಿಗಳಲ್ಲಿದ್ದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಏಳು ಸಮಿತಿಗಳಲ್ಲಿ ಹಾಗೂ ರೈಲ್ವೆ ಸಚಿವ ಪಿಯುಷ್ ಗೋಯಲ್ ಐದು ಸಮಿತಿಗಳಲ್ಲಿದ್ದಾರೆ.

ಕಳೆದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ಹಾಗೂ ಈ ಬಾರಿ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್  ಆರ್ಥಿಕ ವ್ಯವಹಾರಗಳ ಮತ್ತು ಭದ್ರತಾ ಸಂಪುಟ ಸಮಿತಿಗಳಲ್ಲಿದ್ದರೆ, ವಿವಿಧ ನೀತಿಗಳ ಬಗ್ಗೆ ನಿರ್ಧರಿಸುವ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಅವರ ಹೆಸರಿಲ್ಲ. ಈ ಸಮಿತಿಯಲ್ಲಿ ಅಮಿತ್ ಶಾ ಹೊರತಾಗಿ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ನರೇಂದ್ರ ತೋಮರ್, ರವಿಶಂಕರ್ ಪ್ರಸಾದ್, ಹರ್ಷ ವರ್ಧನ್, ಪಿಯೂಷ್ ಗೋಯಲ್, ಪ್ರಹ್ಲಾದ್ ಜೋಷಿ, ರಾಮ್ ವಿಲಾಸ್ ಪಾಸ್ವಾನ್, ಹರ್‍ ಸಿಮ್ರತ್ ಕೌರ್ ಬಾದಲ್ ಹಾಗೂ ಅರವಿಂದ್ ಸಾವಂತ್ ಇದ್ದಾರೆ.

ರಾಜನಾಥ್ ಸಿಂಗ್ ಅವರನ್ನು ಈ  ಸಮಿತಿಯಿಂದ ಹೊರಗಿಟ್ಟಿರುವುದು ಅಚ್ಚರಿ  ಹುಟ್ಟಿಸಿದೆ. ಸರಕಾರದಲ್ಲಿ ಅವರು ನಂ. 2 ಸ್ಥಾನ ಹೊಂದಿದ್ದಾರೆ. ಸಂಪ್ರದಾಯದಂತೆ ಪ್ರಧಾನಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಪ್ರಮಾಣವಚನ ಸ್ವೀಕರಿಸುವವರು  ಸಾಮಾನ್ಯವಾಗಿ  ಪ್ರಧಾನಿಯ ಅನುಪಸ್ಥಿತಿಯಲ್ಲಿ ಸಚಿವ ಸಂಪುಟದ ಹಾಗೂ ರಾಜಕೀಯ ವ್ಯವಹಾರಗಳ ಸಮಿತಿಯ  ಸಭೆಯ ಅಧ್ಯಕ್ಷತೆ ವಹಿಸುತ್ತಾರೆ. ಮೇಲಾಗಿ ನಿರ್ಮಲಾ ಸೀತಾರಾಮನ್ ಅವರು  ಈ ಹಿಂದೆ ರಕ್ಷಣಾ ಸಚಿವರಾಗಿದ್ದಾಗ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಭಾಗವಾಗಿದ್ದರು.

ರಾಜನಾಥ್ ಸಿಂಗ್ ಅವರ ಹೆಸರು ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಂಪುಟ ಸಮಿತಿ,  ಹೂಡಿಕೆ ಮತ್ತು ಅಭಿವೃದ್ಧಿ ಸಮಿತಿ, ಸಂಸದೀಯ ವ್ಯವಹಾರಗಳ ಸಮಿತಿ, ಆರ್ಥಿಕ ವ್ಯವಹಾರಗಳ ಸಮಿತಿ, ಹಾಗೂ ಕ್ಯಾಬಿನೆಟ್ ನೇಮಕಾತಿ ಸಮಿತಿಯಲ್ಲಿಲ್ಲ. ಕ್ಯಾಬಿನೆಟ್ ನೇಮಕಾತಿ ಸಮಿತಿಯಲ್ಲಿ ಕೇವಲ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News