ಪ. ಬಂಗಾಳದ ಹುಡುಗರು ನೆಲ ಗುಡಿಸುವವರು, ಹುಡುಗಿಯರು ಬಾರ್ ಡ್ಯಾನ್ಸರ್ ಗಳು ಎಂದ ಮೇಘಾಲಯ ರಾಜ್ಯಪಾಲ!

Update: 2019-06-06 08:59 GMT

ಹೊಸದಿಲ್ಲಿ, ಜೂ.6: “ಪಶ್ಚಿಮ ಬಂಗಾಳ ಮಹಾನ್ ರಾಜ್ಯವಾಗಿ ಉಳಿದಿಲ್ಲ, ಬಂಗಾಳಿ ಹುಡುಗರು ನೆಲ ಗುಡಿಸುತ್ತಿದ್ದಾರೆ ಹಾಗೂ  ಹುಡುಗಿಯರು ಮುಂಬೈಯಲ್ಲಿ ಬಾರ್ ಡಾನ್ಸರ್ ಗಳಾಗಿದ್ದಾರೆ” ಎಂದು ಟ್ವೀಟ್ ಮಾಡಿ ಮೇಘಾಲಯದ ರಾಜ್ಯಪಾಲ ತಥಾಗತ ರಾಯ್ ವಿವಾದಕ್ಕೀಡಾಗಿದ್ದಾರೆ. ಕೆಲ ರಾಜ್ಯಗಳು ಹಿಂದಿ ಕಲಿಕೆಗೆ ತೋರುತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ರಾಜ್ಯಪಾಲರ ಈ ಹೇಳಿಕೆ ಬಂದಿದೆ.

ಬಂಗಾಳಿಗಳು ಹಿಂದಿ ಕಲಿಕೆಗೆ ತೋರಿಸುತ್ತಿರುವ ವಿರೋಧ ಅಸಮರ್ಥನೀಯ ಹಾಗೂ ಇದು ರಾಜಕೀಯ ಕಾರಣಗಳಿಗಾಗಿ ಎಂದು ಬಿಜೆಪಿಯ ಮಾಜಿ ನಾಯಕರೂ ಆಗಿರುವ ರಾಯ್ ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ.

“ಅಂತಹ ವಿರೋಧವೇನೂ ಇಲ್ಲ. ರಾಜಕೀಯ ಕಾರಣಗಳಿಗಾಗಿ ಸದ್ದು ಮಾಡುತ್ತಿದ್ದಾರೆ. ಅಸ್ಸಾಂ, ಮಹಾರಾಷ್ಟ್ರ ಮತ್ತು ಒಡಿಶಾ ಕೂಡ ಹಿಂದಿಯೇತರ ರಾಜ್ಯಗಳಾಗಿದ್ದರೂ ಅವರು ಹಿಂದಿ ವಿರೋಧಿಸುತ್ತಿಲ್ಲ. ಬಂಗಾಳವು ವಿದ್ಯಾಸಾಗರ, ವಿವೇಕಾನಂದ, ರಬೀಂದ್ರನಾಥ್ ಹಾಗೂ ನೇತಾಜಿ ಅವರ ನಾಡಾಗಿರುವುದರಿಂದ ಬಂಗಾಳಿಗಳು ಹಿಂದಿ ಏಕೆ ಕಲಿಯಬೇಕೆಂಬುದು ಎರಡನೇ ವಾದ'' ಎಂದು ರಾಯ್ ಟ್ವೀಟ್ ಮಾಡಿದ್ದಾರೆ.

“ಈ ಮಹಾನ್ ವ್ಯಕ್ತಿಗಳಿಗೆ ಹಾಗೂ ಹಿಂದಿ ಕಲಿಕೆಗೆ ವಿರೋಧಕ್ಕೆ ಏನು ಸಂಬಂಧ ?, ಎರಡನೆಯದಾಗಿ ಈ ಮಹಾನ್ ವ್ಯಕ್ತಿಗಳ ಯುಗ ಅಂತ್ಯವಾಗಿದೆ ಹಾಗೂ ಬಂಗಾಳ ಮಹಾನ್ ಆಗಿ ಈಗಿಲ್ಲ ಎಂದು ಅವರಿಗೆ ಯಾರು  ವಿವರಿಸುತ್ತಾರೆ ?, ಈಗ ಹರ್ಯಾಣದಿಂದ ಕೇರಳದ ತನಕ, ಬಂಗಾಳಿ ಹುಡುಗರು ಮನೆಗಳ ನೆಲ ಗುಡಿಸುತ್ತಿದ್ದಾರೆ ಹಾಗೂ ಹುಡುಗಿಯರು ಮುಂಬೈಯಲ್ಲಿ ಬಾರ್ ಡ್ಯಾನ್ಸರ್ ಗಳಾಗಿದ್ದಾರೆ. ಇದು ಹಿಂದೆ ಊಹಿಸುವುದು ಅಸಾಧ್ಯವಾಗಿತ್ತು'' ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಯ್ ಅವರ ಬೆಂಬಲಿಗರು ಈ ಹೇಳಿಕೆಗಳನ್ನು ಸಮರ್ಥಿಸಿದ್ದಾರೆ. ಆದರೆ ಇತರ ರಾಜ್ಯಗಳ ಯುವಕರೂ ಇಂತಹುದೇ ಕೆಲಸ ಮಾಡುತ್ತಿದ್ದಾರೆ, ಅದು ಹಿಂದಿ ಕಲಿಯದ ಕಾರಣವಲ್ಲ, ಬದಲಾಗಿ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕೊರತೆಯಿಂದ ಎಂದು ಕೆಲ ಇತರರು ಹೇಳಿದ್ದಾರೆ.

 ತರುವಾಯ ತೃಣಮೂಲ ಕಾಂಗ್ರೆಸ್ ರಾಯ್ ಅವರ ಟ್ವೀಟ್ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News