ಗಡ್ಕರಿ ಸೋಲುತ್ತಾರೆಂದು ಹೇಳಿದ್ದ ಆಡಿಯೋ ಲೀಕ್: ಇಬ್ಬರು ಬಿಜೆಪಿ ನಾಯಕರ ಉಚ್ಚಾಟನೆ

Update: 2019-06-06 15:09 GMT

ನಾಗ್ಪುರ(ಮಹಾರಾಷ್ಟ್ರ),ಜೂ.6: ಮತ ಎಣಿಕೆ ಆರಂಭಗೊಳ್ಳುವ ಮೊದಲೇ ಕೇಂದ್ರ ಸಚಿವ ಹಾಗೂ ಹಿರಿಯ ನಾಯಕ ನಿತಿನ್ ಗಡ್ಕರಿ ಅವರನ್ನು ನಿಂದಿಸಿದ್ದಕ್ಕಾಗಿ ಮತ್ತು ಅವರು ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಹೇಳಿದ್ದಕ್ಕಾಗಿ ನಾಗ್ಪುರ ನಗರ ಬಿಜೆಪಿಯ ಉಪಾಧ್ಯಕ್ಷ ಜೈಹರಿ ಸಿಂಗ್ ಠಾಕೂರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಅಭಯ ತಿಡ್ಕೆ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಈ ಇಬ್ಬರು ನಾಯಕರು ದೂರವಾಣಿಯಲ್ಲಿ ನಡೆಸಿದ್ದ ಸಂಭಾಷಣೆಯ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪಕ್ಷವು ಈ ಕ್ರಮವನ್ನು ತೆಗೆದುಕೊಂಡಿದೆ. ನಾಗ್ಪುರ ಲೋಕಸಭಾ ಕ್ಷೇತ್ರದಲ್ಲಿ ಗಡ್ಕರಿ ಅವರು ಕಾಂಗ್ರೆಸ್ ಅಭ್ಯರ್ಥಿ ನಾನಾ ಪಾಟೋಲೆ ಎದುರು ಸೋಲುತ್ತಾರೆ ಎಂದು ಹೇಳಿದ್ದ ಈ ನಾಯಕರಿಬ್ಬರೂ ಅವರನ್ನು ನಿಂದಿಸಿದ್ದರು. ಗಡ್ಕರಿ ಸುಮಾರು 1.97 ಲ.ಮತಗಳ ಅಂತರದಿಂದ ಗೆದ್ದಿದ್ದಾರೆ.

ಗಡ್ಕರಿ ಶ್ರೀಮಂತರಿಗೆ ಮಾತ್ರ ಮಣೆ ಹಾಕುತ್ತಾರೆ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಾರೆ, ಹೀಗಾಗಿ ಅವರು ಗೆಲ್ಲುವುದಿಲ್ಲ ಎಂದು ಠಾಕೂರ್ ಮತ್ತು ತಿಡ್ಕೆ ಹೇಳಿದ್ದರು ಎಂದು ಬಿಜೆಪಿಯ ನಾಗ್ಪುರ ಘಟಕದ ಅಧ್ಯಕ್ಷ ಸುಧಾಕರ ಕೊಹ್ಲೆ ತಿಳಿಸಿದರು.

ಆಡಿಯೋ ತುಣುಕನ್ನು ತಿರುಚಲಾಗಿದೆ ಮತ್ತು ತನಗೆ ಗಡ್ಕರಿ ಮತ್ತು ಇತರ ನಾಯಕರ ಬಗ್ಗೆ ಹೆಚ್ಚಿನ ಗೌರವವಿದೆ ಎಂದು ಠಾಕೂರ್ ಹೇಳಿದ್ದಾರೆ.

ಉಚ್ಚಾಟನೆಯಿಂದಾಗಿ ಠಾಕೂರ್ ಅವರು ಸಂಜಯ ಗಾಂಧಿ ನಿರಾಧಾರ್ ಯೋಜನೆ(ಪ.ನಾಗ್ಪುರ)ಯ ಅಧ್ಯಕ್ಷ ಹುದ್ದೆಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರೀಗ ಎದೆನೋವು ಎಂದು ದೂರಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News