ಪರಿಸರ ಸಂರಕ್ಷಣೆಯಲ್ಲಿ ಜನರಿಗೂ ಜವಾಬ್ದಾರಿ ಇದೆ: ಡಾ.ಹೆಗ್ಗಡೆ

Update: 2019-06-06 16:10 GMT

ಉಡುಪಿ, ಜೂ.6: ಪರಿಸರ ಸಂರಕ್ಷಣೆ ಕೇವಲ ಸರಕಾರಗಳ ಹೊಣೆಗಾರಿಕೆ ಯಲ್ಲ. ಇದರಲ್ಲಿ ನಾಡಿನ ಪ್ರತಿಯೊಬ್ಬ ನಾಗರಿಕರಿಗೂ ಅಷ್ಟೇ ಜವಾಬ್ದಾರಿ ಇದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೋತ್ಸವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂಬಂಧ ರಾಜಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸಸ್ಯ ಗೋಪುರಮ್’ ತುಳಸಿ ಗಿಡ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ನಾಡಿನ ಪ್ರತಿಯೊಬ್ಬರು ತಮ್ಮ ಮನೆಯಲ್ಲಿರುವ ಸ್ವಲ್ಪ ಜಾಗದಲ್ಲಿಯಾದರೂ ಕಡೇಪಕ್ಷ ಒಂದಾದರೂ ಗಿಡವನ್ನು ನೆಟ್ಟು ಬೆಳೆಸುವ ಮೂಲಕ ಪರಿಸರದ ರಕ್ಷಣೆಗೆ ಕೊಡುಗೆ ನೀಡಿ. ಈ ಮೂಲಕ ನಮ್ಮ ಮುಂದಿನ ಪೀಳಿಗೆಯೂ ಬದುಕುವಂತೆ ಮಾಡಿ ಎಂದವರು ಸಲಹೆ ನೀಡಿದರು.

ಪರಿಸರ ನಾಶದಿಂದಾಗಿ ಈಗೀಗ ಮಳೆ ಕಡಿಮೆಯಾಗಿ ಕೃಷಿ ಇಲ್ಲದಂತಾಗಿದೆ. ವಾತಾವರಣವೂ ಬದಲಾಗುತ್ತಿದೆ. ಕರಾವಳಿಯಲ್ಲಿ ಈಚಿನ ವರ್ಷಗಳಲ್ಲಿ ಬಂದಿರುವ ದೊಡ್ಡ ದೊಡ್ಡ ಕಾರ್ಖಾನೆಗಳ ಕೊಡುಗೆಯೂ ಇದರಲ್ಲಿ ಬಹಳಷ್ಟಿದೆ. ಈಗಿನ ವಾತಾವಣ ನೋಡುವಾಗ ಮುಂದಿನ 50-100 ವರ್ಷಗಳ ಬಳಿಕ ನಮ್ಮ ಮುಂದಿನ ಪೀಳಿಗೆ ಬಗ್ಗೆ ಪ್ರಶ್ನೆ ಮೂಡುತ್ತದೆ ಎಂದರು.

ಇದೇ ವೇಳೆ ಸುವರ್ಣ ಗೋಪುರ ನಿರ್ಮಾಣ ಕಾರ್ಯಕ್ಕೆ ಡಾ.ಹೆಗ್ಗಡೆ ಅವರು ಧರ್ಮಸ್ಥಳದ ವತಿಯಿಂದ ಐದುಲಕ್ಷ ರೂ.ಗಳ ಚೆಕ್‌ನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಗೆ ನೀಡಿದರು. ಸಮಾರಂಭದಲ್ಲಿ ವಾಗೀಶ ಆಚಾರ್ಯರು ಸಂಪಾದಿಸಿದ ಮಧ್ವಾಚಾರ್ಯರ ‘ಅಣುಮಧ್ವವಿಜಯ’ ಕನ್ನಡ ಮತ್ತು ಸಂಸ್ಕೃತ ಕೃತಿಯನ್ನು ಸ್ವಾಮೀಜಿ ಬಿಡುಗಡೆ ಗೊಳಿಸಿದರು.

ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಕಲ್ಲಾಪುರ ಪವಮಾನಾಚಾರ್ಯರು ಪ್ರವಚನ ನೀಡಿದರು. ವಿಜಯಾ ಬ್ಯಾಂಕ್‌ನ ಎಂ.ಜೆ.ನಾಗರಾಜ್, ಕಟೀಲಿನ ಅರ್ಚಕ ವಾಸುದೇವ ಅಸ್ರಣ್ಣ, ಹೊಸಪೇಟೆಯ ಉದ್ಯಮಿ ಪ್ರಭಾಕರ ಸೆಟ್ಟಿ ದಂಪತಿ, ಹರಿಕೃಷ್ಣ ಪುನರೂರು, ಪವಿತ್ರ ವನ ನಿರ್ಮಾಣ ಯೋಜನೆ ಹಮ್ಮಿಕೊಂಡ ಧರ್ಮ ಫೌಂಡೇಷನ್‌ನ ಗಿರೀಶ್ ಜಿ.ಎನ್., ಉದ್ಯಮಿ ಹರಿಯಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.

ದಿವಾನ ಶಿಬರೂರು ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು. ಕೊರ್ಲಹಳ್ಳಿ ವೆಂಕಟೇಶಾಚಾರ್ಯರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News