×
Ad

ಬಿಜೆಪಿ ಅಸಾಂವಿಧಾನಿಕ ಕಾಯ್ದೆ ಮಂಡಿಸುವುದಾದರೆ ನಾವೇಕೆ ಮಾಡಬಾರದು: ಚು. ಆಯೋಗಕ್ಕೆ ಮಿಝೊ ಪಕ್ಷದ ಉತ್ತರ

Update: 2019-06-06 22:42 IST

ಹೊಸದಿಲ್ಲಿ, ಜೂ.6: ಚುನಾವಣೆಯಲ್ಲಿ ಗೆದ್ದರೆ ರಾಜ್ಯ ವಿಧಾನಸಭೆಯಲ್ಲಿ ಭಾರತದಿಂದ ಪ್ರತ್ಯೇಕಗೊಳ್ಳುವ ಮಸೂದೆ ಮಂಡಿಸುತ್ತೇವೆ ಎಂದು ಚುನಾವಣೆ ಪ್ರಚಾರದ ಸಂದರ್ಭ ಭರವಸೆ ನೀಡಿರುವ ಮಿಝೊರಾಂನ ‘ಪ್ರಿಸಂ’ ಪಕ್ಷಕ್ಕೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮ ಪಕ್ಷದ ರಾಜಕೀಯ ಮಾನ್ಯತೆಯನ್ನು ಯಾಕೆ ರದ್ದುಗೊಳಿಸಬಾರದು ಎಂದು ಜೂನ್ 20ರೊಳಗೆ ತಿಳಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ವರದಿಯಾಗಿದೆ.

 ಪೀಪಲ್ಸ್ ರೆಪ್ರೆಸೆಂಟೇಷನ್ ಫಾರ್ ಐಡೆಂಟಿಟಿ ಆ್ಯಂಡ್ ಸ್ಟೇಟಸ್ ಆಫ್ ಮಿರೆರಾಂ(ಪ್ರಿಸಂ)ನ ಅಧ್ಯಕ್ಷ ವನ್‌ಲಾಲ್ರುತ ಎಪ್ರಿಲ್ 11ರಂದು ಈ ಹೇಳಿಕೆ ನೀಡಿದ್ದರು. ಚುನಾವಣಾ ಆಯೋಗದ ನೋಟಿಸ್ ಬಂದಿರುವುದನ್ನು ದೃಢೀಕರಿಸಿರುವ ವನ್‌ಲಾಲ್ರುತ , ಆಡಳಿತಾರೂಢ ಬಿಜೆಪಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸಂಸತ್ತಿನಲ್ಲಿ ಮರು ಮಂಡಿಸುವುದಾದರೆ, ಈಶಾನ್ಯ ರಾಜ್ಯಗಳನ್ನು ಭಾರತದಿಂದ ಪ್ರತ್ಯೇಕಗೊಳಿಸುವ ಮಸೂದೆಯನ್ನು ತಮ್ಮ ಪಕ್ಷ ಯಾಕೆ ಮಂಡಿಸಬಾರದು ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ‘ಬೇರ್ಪಡುವ ಹಕ್ಕು’ ಮಸೂದೆಯನ್ನು ಮಂಡಿಸುವ ಭರವಸೆ ನೀಡಿದ್ದ ಪ್ರಿಸಂಗೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಕಳೆದ ಮಾರ್ಚ್ 18ರಂದು ಆಯೋಗ ನೀಡಿದ್ದ ನೋಟಿಸ್‌ಗೆ ಮಾರ್ಚ್ 27ರಂದು ಉತ್ತರಿಸಿದ್ದೇವೆ. ಇದೀಗ ಈ ನೋಟಿಸ್‌ಗೂ ಉತ್ತರ ಸಿದ್ಧಪಡಿಸುತ್ತಿದ್ದು ಜೂನ್ 20ರೊಳಗೆ ಉತ್ತರಿಸುತ್ತೇವೆ ಎಂದು ಪ್ರಿಸಂನ ಪ್ರಧಾನ ಕಾರ್ಯದರ್ಶಿ(ರಾಜಕೀಯ ವ್ಯವಹಾರ) ರೀನಾ ಚಾಂಗ್ತು ಹೇಳಿದ್ದಾರೆ.

 ಈ ಹಿಂದೆ ನೀಡಿದ್ದ ಉತ್ತರವನ್ನೂ ನಾವು ಮತ್ತೆ ನೀಡಲಿದ್ದೇವೆ. ನಮ್ಮ ಹೇಳಿಕೆ ಸ್ಪಷ್ಟವಾಗಿದೆ ಎಂದವರು ಹೇಳಿದ್ದಾರೆ. ನಮ್ಮ ಹೇಳಿಕೆ ಸಂವಿಧಾನ ವಿರೋಧಿ, ದೇಶದ ಏಕತೆ ಮತ್ತು ಸಮಗ್ರತೆಯ ವಿರೋಧಿ ಎಂದು ಪರಿಗಣಿಸುವುದಾದರೆ ಬಿಜೆಪಿಯ ಹೇಳಿಕೆ ಕೂಡಾ ಇದೇ ವರ್ಗಕ್ಕೆ ಸೇರುವುದಿಲ್ಲವೇ. ಬಿಜೆಪಿಯ ಹೇಳಿಕೆ ದೇಶದ ಈಶಾನ್ಯ ಪ್ರದೇಶದ ಮೇಲೆ ಮಾತ್ರವಲ್ಲ, ದೇಶವನ್ನು ಜನಸಂಖ್ಯಾ ಆಧಾರದಲ್ಲಿ ವಿಭಜಿಸುವಂತಹ ಪರಿಣಾಮ ಬೀರುವುದಿಲ್ಲವೇ ಎಂದವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News