ಶಾಲಾ ಕಾಲೇಜು ಬಳಿ ಬೀಡಿ-ಸಿಗರೇಟು ಮಾರಾಟ ಕಂಡುಬಂದಲ್ಲಿ ಫೋಟೋ ತೆಗೆದು ವಾಟ್ಸ್ಯಾಪ್ ಮಾಡಿ: ಡಿಸಿಪಿ

Update: 2019-06-07 11:33 GMT

ಮಂಗಳೂರು, ಜೂ.7: ಶಾಲಾ-ಕಾಲೇಜುಗಳ ಸಮೀಪ ಬೀಡಿ, ಸಿಗರೇಟು ಮಾರುವಂತಿಲ್ಲ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಫೋಟೋ ತೆಗೆದು ಪೊಲೀಸರ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಮಾತ್ರವಲ್ಲದೆ, ಕೊಟ್ಪಾ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇಲಾಖೆ ಪ್ರಯತ್ನಿಸಲಿದೆ ಎಂದು ಡಿಸಿಪಿ ಹನುಮಂತರಾಯ ಹೇಳಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರ ಪ್ರಶ್ನೆಗೆ ಡಿಸಿಪಿ ಈ ಪ್ರತಿಕ್ರಿಯೆ ನೀಡಿದ್ದಾರೆ. ದೇರಳಕಟ್ಟೆ ಬಳಿ ಆಟೋ ರಿಕ್ಷಾಗಳಲ್ಲಿ ಅಧಿಕ ದರ ವಸೂಲು ಮಾಡಲಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ದೇರಳಕಟ್ಟೆಯಲ್ಲಿ ಸಾಕಷ್ಟು ಆಸ್ಪತ್ರೆಗಳಿದ್ದು, ಅಲ್ಲಿಗೆ ಹೊರ ಜಿಲ್ಲೆಗಳಿಂದಲೂ ರೋಗಿಗಳನ್ನು ಕರೆದುಕೊಂಡು ಜನ ಬರುತ್ತಾರೆ. ಆ ಸಂದರ್ಭ ಅವರಿಂದಲೂ ಹೆಚ್ಚಿನ ದರ ವಸೂಲು ಮಾಡುತ್ತಾರೆ. ಈ ಬಗ್ಗೆ ರಿಕ್ಷಾ ಪಾರ್ಕ್‌ಗಳಲ್ಲಿ ಆಟೋ ದರವನ್ನು ಅಳವಡಿಸಲು ಸೂಚಿಸಬೇಕು ಎಂದೂ ಅವರು ಸೂಚನೆ ನೀಡಿದರು.

ಬಗೆಹರಿಯದ ಮಾರ್ಕೆಟ್ ರೋಡ್ ಸಮಸ್ಯೆ!

ಮಾರುಕಟ್ಟೆ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿಗಳಿಂದಾಗಿ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ಹಾಗಾಗಿ ಆ ರಸ್ತೆಯಲ್ಲಿ ವಾಹನಗಳಲ್ಲಿ ಸಾಗುವುದು ಮಾತ್ರವಲ್ಲ, ನಡೆದಾಡಲು ಆಗದ ಪರಿಸ್ಥಿತಿ ಇದೆ ಎಂದು ನಾಗರಿಕರೊಬ್ಬರು ದೂರಿದರು. ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯ ಮಹಾನಗರ ಪಾಲಿಕೆಯಿಂದ ಮಾಡುವಂತದ್ದು. ಅವರಿಗೆ ಪೊಲೀಸರು ರಕ್ಷಣೆಯನ್ನು ಮಾತ್ರ ನೀಡುತ್ತಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ಲಕ್ಷ್ಮೀ ಗಣೇಶ್ ತಿಳಿಸಿದರು.

ಡಿಸಿಪಿ ಹನುಮಂತರಾಯ ಪ್ರತಿಕ್ರಿಯಿಸಿ, ಇದು ಒಂದು ದಿನದಲ್ಲಿ ಬಗೆಹರಿಯುವ ಸಮಸ್ಯೆ ಅಲ್ಲ. ಬೀದಿಬದಿ ವ್ಯಾಪಾರಿಗಳೂ ವ್ಯಾಪಾರ ನಡೆಸುವ ಹಕ್ಕಿದೆ. ಅವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಹಾಗಿದ್ದರೂ ಸಂಚಾರಕ್ಕೆ ಅಡ್ಡಿಯಾಗುವ ಸಂದರ್ಭ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ದೇರಳಕಟ್ಟೆ ಅಂಬೇಡ್ಕರ್ ಪದವಿಗೆ ಬಸ್ಸು ವ್ಯವಸ್ಥೆ ಕಲ್ಪಿಸಿ

ದೇರಳಕಟ್ಟೆ ಅಂಬೇಡ್ಕರ್ ಪದವಿಗೆ ಬಸ್ಸು ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರೊಬ್ಬರು ಆಗ್ರಹಿಸಿದಾಗ, ಈ ಬಗ್ಗೆ ಆರ್‌ಟಿಒ ಗಮನಕ್ಕೆ ತಂದು ಕೆಎಸ್ಸಾರ್ಟಿಸಿ ಬಸ್ಸು ಹಾಕಲು ಸಲಹೆ ನೀಡಲಾಗುವುದು ಎಂದು ಡಿಸಿಪಿ ಹನುಮಂತರಾಯ ಹೇಳಿದರು.

ಈ ಸಂದರ್ಭ ಕೆನರಾ ಬಸ್ಸು ಮಾಲಕರ ಪರವಾಗಿ ಉಪಸ್ಥಿತರಿದ್ದ ರಾಜವರ್ಮ ಬಲ್ಲಾಳ್ ಹಾಗೂ ಸಿಟಿ ಬಸ್ಸು ಮಾಲಕರ ಸಂಘದ ದಿಲ್‌ರಾಜ್ ಆಳ್ವ ಪ್ರತಿಕ್ರಿಯಿಸಿ, ಏರಿಯಾ ಸ್ಕೀಮ್‌ನಡಿ ಬಸ್ಸು ಸಂಚಾರ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುವ ನಿಟ್ಟಿನಲ್ಲಿ ಖಾಸಗಿಯಾಗಲಿ, ಕೆಎಸ್ಸಾರ್ಟಿಸಿಯಾಗಲಿ ಬಸ್ಸು ಓಡಿಸಲು ಹೊಸ ಪರವಾನಿಗೆಯನ್ನೇ ನೀಡಲಾಗುತ್ತಿಲ್ಲ. ಹಾಗಿರುವಾಗ ಬಸ್ಸು ಹಾಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಟಿಕೆಟ್ ನೀಡುವುದಿಲ್ಲ, ಬಸ್ಸು ಓಡಿಸುವುದಿಲ್ಲ!
ನಗರದ ಸಿಟಿ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಸರಿಯಾಗಿ ನಿರ್ವಾಹಕರು ಟಿಕೆಟ್ ನೀಡುವುದಿಲ್ಲ. ಸುಲ್ತಾನ್ ಬತ್ತೇರಿಯಲ್ಲಿ ರಾತ್ರಿ 7:30ರ ನಂತರ ಬಸ್ ಟ್ರಿಪ್ ಕಟ್ ಮಾಡುತ್ತಾರೆ. ಫುಟ್‌ಪಾತ್‌ಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಾರೆ, ಶಾಲಾ ಕಾಲೇಜು ಬಳಿ ಹಂಪ್‌ಗಳನ್ನು ಹಾಕಿ, ಕಾರು ಪಾರ್ಕಿಂಗ್‌ನಲ್ಲಿ ದ್ವಿಚಕ್ರ ವಾಹನ ನಿಲುಗಡೆ ಎಂಬ ದೂರುಗಳು ಇಂದು ಕೂಡಾ ಸಾರ್ವಜನಿಕರಿಂದ ಕೇಳಿ ಬಂತು. ಇದೇ ವೇಳೆ, ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ರಸ್ತೆಗಳಲ್ಲಿ ಬೀದಿ ನಾಯಿ ಕಾಟ ಎಂಬ ದೂರುಗಳು ಕೂಡಾ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವ್ಯಕ್ತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News