ಮುಂದಿನ ವಾರ ಮಂಗಳೂರಿನ ಸಿಟಿ ಬಸ್ಸುಗಳ ವಿರುದ್ಧ ವಿಶೇಷ ಕಾರ್ಯಾಚರಣೆ: ಉಪಪೊಲೀಸ್ ಆಯುಕ್ತ ಲಕ್ಷ್ಮೀ ಗಣೇಶ್

Update: 2019-06-07 09:42 GMT

ಮಂಗಳೂರು, ಜೂ.7: ಮಂಗಳೂರು ನಗರದಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‌ಗಳ ವಿರುದ್ಧ ಫೋನ್-ಇನ್ ಕಾರ್ಯಕ್ರಮ, ಸಾಮಾಜಿಕ ಜಾಲತಾಣ, ಸಾರ್ವಜನಿಕರಿಂದ ಪದೇಪದೇ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗ ಉಪಪೊಲೀಸ್ ಆಯುಕ್ತ ಲಕ್ಷ್ಮೀ ಗಣೇಶ್ ತಿಳಿಸಿದ್ದಾರೆ.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಿಟಿ ಬಸ್ ಮಾಲಕರ ಹಾಗೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ನಗರದ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡದಿರುವ ಬಗ್ಗೆ, ಬಸ್‌ಬೇಯಲ್ಲಿ ಬಸ್ ನಿಲ್ಲದಿರುವ ಬಗ್ಗೆ, ಬಸ್ ಚಾಲನೆಯಲ್ಲಿ ನಿರ್ಲಕ್ಷ, ಅಪರಿಮಿತ ವೇಗ, ುಟ್‌ಬೋರ್ಡ್‌ಗಳಲ್ಲಿ ನೇತಾಡುವುದು, ಹಿರಿಯ ನಾಗರಿಕರಿಗೆ ಸೀಟು ನೀಡದಿರುವುದು, ಮಹಿಳಾ ಮೀಸಲು ಸೀಟು ಸಮಸ್ಯೆ, ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಹಲವಾರು ದೂರುಗಳು ಪದೇಪದೇ ಬರುತ್ತಿದೆ. ಬಸ್ ವ್ಯವಸ್ಥೆ ಸಾರ್ವಜನಿಕ ಸೇವೆಯಾಗಿದ್ದು, ಅದಕ್ಕೂ ಪೂರಕ ಸೇವೆ ನೀಡುವುದು ಬಸ್ ಮಾಲಕರ ಕರ್ತವ್ಯ ಎಂದರು.

ಬಸ್‌ಗಳ ಸಮಸ್ಯೆಯ ಬಗ್ಗೆ ಮಾಲಕರ ಗಮನಕ್ಕೆ ತರಲು ಈ ಸಭೆ ಕರೆಯಲಾಗಿದ್ದು, ಈಗಾಗಲೇ ಹೇಳಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಈ ವಾರದೊಳಗೆ ಪ್ರಯಾಣಿಕರ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು. ಈ ಬಗ್ಗೆ ತಪಾಸಣೆಗೆ ಮುಂದಿನ ವಾರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಹಾಗೂ ನಿಯಮ ಮೀರುವ ಬಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಮಾತನಾಡಿ, ಬಸ್‌ಗಳ ಸಮಸ್ಯೆಗಳ ಬಗ್ಗೆ ಈಗಾಗಲೇ ಅಸೋಸಿಯೇಶನ್ ಸಭೆಯಲ್ಲಿ ಬಸ್ ಮಾಲಕರ ಗಮನಕ್ಕೆ ತರಲಾಗಿದೆ. ಇಂದಿನ ಸಭೆಯ ಬಗ್ಗೆಯೂ ಮತ್ತೊಮ್ಮೆ ಬಸ್ ಮಾಲಕರ ಗಮನಕ್ಕೆ ತಂದು ಸುಧಾರಣೆಗೆ ಪ್ರಯತ್ನಿಸಲಾಗುವುದು ಎಂದರು.

ಮಂಗಳೂರು ನಗರ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News