ಚಾರ್ಜಿಂಗ್ ವೇಳೆ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ: 12 ವರ್ಷದ ಬಾಲಕ ಬಲಿ
Update: 2019-06-07 15:16 IST
ಭೋಪಾಲ್, ಜೂ.7: ಮೊಬೈಲ್ ಫೊನ್ ನ ಬ್ಯಾಟರಿ ಸ್ಫೋಟಗೊಂಡು 12 ವರ್ಷದ ಬಾಲಕ ಮೃತಮಟ್ಟ ಘಟನೆ ಮಧ್ಯ ಪ್ರದೇಶದ ಧರ್ ಎಂಬ ಗ್ರಾಮದಿಂದ ವರದಿಯಾಗಿದೆ.
ಮೃತ ಬಾಲಕನನ್ನು ಲಖನ್ ಎಂದು ಗುರುತಿಸಲಾಗಿದೆ. ಚೀನೀ ನಿರ್ಮಿತ ತನ್ನ ಮೊಬೈಲ್ ಫೋನ್ ನ ಬ್ಯಾಟರಿಯನ್ನು ಹೊರತೆಗೆದ ಬಾಲಕ ಅದನ್ನು ಪ್ರತ್ಯೇಕ ಚಾರ್ಜರ್ ಗೆ ಸಿಕ್ಕಿಸಿದಾಗ ಬ್ಯಾಟರಿ ಸ್ಫೋಟಗೊಂಡಿತ್ತೆಂದು ಹೇಳಲಾಗಿದೆ. ಬಾಲಕನ ಮುಖ ಮತ್ತು ಎದೆಯ ಭಾಗಕ್ಕೆ ಗಂಭೀರ ಗಾಯಗಳುಂಟಾಗಿದ್ದವು.
ಸದ್ದು ಕೇಳಿ ಬಾಲಕನ ಮಾವ ಓಡಿ ಬಂದಾಗ ಲಖನ್ ನೆಲದಲ್ಲಿ ಪ್ರಜ್ಞಾಶೂನ್ಯನಾಗಿ ಬಿದ್ದಿದ್ದನ್ನು ಕಂಡು ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಲಖನ್ ಅದಾಗಲೇ ಮೃತಟ್ಟಿದ್ದಾನೆಂದು ವೈದ್ಯರು ಘೋಷಿಸಿದರು.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಹೈದರಾಬಾದ್ ನ ಯುವಕನೊಬ್ಬ ಸ್ಕೂಟರ್ ಚಲಾಯಿಸುತ್ತಿದ್ದಾಗ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಘಟನೆ ನಡೆದಿತ್ತು.