ಜಾರ್ಖಂಡ್: 3 ತಿಂಗಳಿಂದ ಪಡಿತರ ಆಹಾರ ದೊರೆಯದೆ ಹಸಿವಿನಿಂದ ವ್ಯಕ್ತಿ ಮೃತ್ಯು; ಆರೋಪ

Update: 2019-06-07 13:26 GMT

ರಾಂಚಿ: ಜಾರ್ಖಂಡ್ ರಾಜ್ಯದ ಲಾಟೆಹಾರ್ ಜಿಲ್ಲೆಯ 65 ವರ್ಷದ ರಾಮ್ ಚರಣ್ ಮುಂಡ ಎಂಬವರಿಗೆ ಕಳೆದ ಮೂರು ತಿಂಗಳಿನಿಂದ ಪಡಿತರ ಆಹಾರವನ್ನು ನಿರಾಕರಿಸಿದ್ದರಿಂದ ಅವರು ಹಸಿವಿನಿಂದ ನರಳಿ ಸಾವನ್ನಪ್ಪಿದ್ದಾರೆ ಎಂದು newindianexpress.com ವರದಿ ಮಾಡಿದೆ. ನ್ಯಾಯಬೆಲೆ ಅಂಗಡಿಯಲ್ಲಿನ ಪಾಯಿಂಟ್ ಆಫ್ ಸೇಲ್ ಯಂತ್ರ ನೆಟ್ವರ್ಕ್ ಸಮಸ್ಯೆಯಿಂದ ಕಾರ್ಯನಿರ್ವಹಿಸದೇ ಇದ್ದುದರಿಂದ ಆತನಿಗೆ ಪಡಿತರ ನಿರಾಕರಿಸಲಾಗಿತ್ತೆಂದು ಆರೋಪಿಸಲಾಗಿದೆ.

ಆದರೆ ಇಂತಹ ಘಟನೆ ನಡೆದಿದೆ ಎಂಬುದನ್ನು ಜಿಲ್ಲಾಡಳಿತ ನಿರಾಕರಿಸಿದೆಯಲ್ಲದೆ ಆತ ತನ್ನ ಕುಡಿತದ ಚಟದಿಂದ ಮೃತಪಟ್ಟಿದ್ದಾನೆಂದು ಹೇಳಿದೆ. ಆತ ಸಾಯುವುದಕ್ಕಿಂತ ಎರಡು ದಿನ ಮುನ್ನ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು ಎಂದೂ ಆಡಳಿತ ಹೇಳಿಕೊಂಡಿದೆ.

ಆದರೆ ರಾಮ್ ಚರಣ್ ಮುಂಡಾನ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಆಹಾರ ತಯಾರಿಸಲಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇಡೀ ಗ್ರಾಮಕ್ಕೆ ಮೂರು ತಿಂಗಳಿನಿಂದ ಪಡಿತರ ಆಹಾರ ವಸ್ತುಗಳನ್ನು ನಿರಾಕರಿಸಲಾಗಿತ್ತು. ಜಿಲ್ಲಾಡಳಿತಕ್ಕೆ ಈ ಬಗ್ಗೆ ದೂರಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

“ಮುಂಡಾ ತನ್ನ ಪತ್ನಿ ಹಾಗೂ ಪುತ್ರಿ ಜತೆಯಲ್ಲಿ ವಾಸವಾಗಿದ್ದ ಹಾಗೂ ದಿನಗೂಲಿ ಕಾರ್ಮಿಕನಾಗಿದ್ದ, ಆತನಿಗೆ ಮೂರು ತಿಂಗಳಿನಿಂದ ಪಡಿತರ ಸಾಮಗ್ರಿ ದೊರಕಿಲ್ಲ,'' ಎಂದು ಮನ್‍ರೇಗಾ ಸೇವಾ ಕೇಂದ್ರ ನಡೆಸುವ ಅಫ್ಸಾನ ಖಾತೂನ್ ಹೇಳಿದ್ದಾರೆ. ಆದರೆ ಉಪವಿಭಾಗೀಯ ಅಧಿಕಾರಿ ಸುಧೀರ್ ದಾಸ್ ಈ ಆರೋಪ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News