ಸೋನಿಯಾ ಗಾಂಧಿಯನ್ನು ಭೇಟಿಯಾದ ಸಂಸದೀಯ ವ್ಯವಹಾರಗಳ ಸಚಿವ ಜೋಶಿ

Update: 2019-06-07 13:30 GMT

ಹೊಸದಿಲ್ಲಿ,ಜೂ.7: ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಶುಕ್ರವಾರ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದು,ಜೂ.17ರಿಂದ ಆರಂಭಗೊಳ್ಳಲಿರುವ ಸಂಸತ್ ಅಧಿವೇಶನದ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ನೂತನವಾಗಿ ಚುನಾಯಿತವಾಗಿರುವ 17ನೇ ಲೋಕಸಭೆಯ ಮೊದಲ ಅಧಿವೇಶನ ಜು.26ರವರೆಗೆ ನಡೆಯಲಿದ್ದು, ಜು.5ರಂದು ಮುಂಗಡಪತ್ರ ಮಂಡನೆಯಾಗಲಿದೆ.

ಸೋನಿಯಾ ನಿವಾಸಕ್ಕೆ ಜೋಶಿಯವರ ಭೇಟಿ ಅಧಿವೇಶನಕ್ಕೆ ಮುನ್ನ ಪ್ರತಿಪಕ್ಷಗಳನ್ನು ತಲುಪುವ ಸರಕಾರದ ಕಸರತ್ತಿನ ಭಾಗವಾಗಿದ್ದು,ಉಭಯ ನಾಯಕರು ಸುಮಾರು 15 ನಿಮಿಷಗಳ ಕಾಲ ಮಾತುಕತೆಗಳನ್ನು ನಡೆಸಿದರು ಎಂದು ಬಲ್ಲ ಮೂಲಗಳು ತಿಳಿಸಿದವು.

ಜೋಶಿ ಅವರು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಮತ್ತು ಲೋಕಸಭೆಯಲ್ಲಿ ಡಿಎಂಕೆಯ ಸದನ ನಾಯಕ ಟಿ.ಆರ್.ಬಾಲು ಅವರನ್ನೂ ಭೇಟಿಯಾದರು.

ಅಧಿವೇಶನದಲ್ಲಿ ಬಜೆಟ್ ಮಂಡನೆಯಲ್ಲದೆ,ದಿಢೀರ್ ತ್ರಿವಳಿ ತಲಾಕ್ ನಿಷೇಧ ಸೇರಿದಂತೆ 10 ಹೊಸ ಸುಗ್ರೀವಾಜ್ಞೆಗಳನ್ನು ಕಾನೂನುಗಳನ್ನಾಗಿ ಪರಿವರ್ತಿಸಲೂ ಸರಕಾರವು ಉದ್ದೇಶಿಸಿದೆ. ಹಿಂದಿನ ಸರಕಾರವು ಈ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ಈ ಸುಗ್ರೀವಾಜ್ಞೆಗಳನ್ನು ಹೊರಡಿಸಿತ್ತು.

ಅಧಿವೇಶನದ ಮೊದಲ ಎರಡು ದಿನಗಳ ಕಾಲ ನೂತನ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಲೋಕಸಭಾ ಅಧ್ಯಕ್ಷರ ಚುನಾವಣೆ ಜೂ.19ರಂದು ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜೂ.20ರಂದು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News