ನೀತಿ ಆಯೋಗದ ಪದ ನಿಮಿತ್ತ ಸದಸ್ಯರಾಗಿ ಅಮಿತ್ ಶಾ ನೇಮಕ

Update: 2019-06-07 15:27 GMT

ಹೊಸದಿಲ್ಲಿ, ಜೂ.7: ಪುನರ್ರಚಿಸಿದ ನೀತಿ ಆಯೋಗದ ಪದ ನಿಮಿತ್ತ ಸದಸ್ಯರನ್ನಾಗಿ ಅಮಿತ್ ಶಾರನ್ನು ಸರಕಾರ ನೇಮಕ ಮಾಡಿದೆ.

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಮ್ಮ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೂ ಪದನಿಮಿತ್ತ ಸದಸ್ಯರಾಗಿರುತ್ತಾರೆ ಎಂದು ಸರಕಾರ ತಿಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀತಿ ಆಯೋಗದ ಅಧ್ಯಕ್ಷರಾಗಿದ್ದರೆ, ವಿಕೆ ಸಾರಸ್ವತ್, ರಮೇಶ್ ಚಂದ್ ಮತ್ತು ವಿಕೆ ಪೌಲ್ ಪೂರ್ಣಕಾಲಿಕ ಸದಸ್ಯರಾಗಿರುತ್ತಾರೆ. ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ಥಾವರ್‌ಚಂದ್ ಗೆಹ್ಲೋಟ್, ರೈಲ್ವೇ ಸಚಿವ ಪಿಯೂಷ್ ಗೋಯಲ್, ಅಂಕಿಅಂಶ ಇಲಾಖೆಯ ಸಹಾಯಕ(ಸ್ವತಂತ್ರ ಹೊಣೆಗಾರಿಕೆ) ಸಚಿವ ರಾವ್ ಇಂದರ್‌ಜಿತ್ ಸಿಂಗ್ ಖಾಯಂ ಆಹ್ವಾನಿತರಾಗಿದ್ದಾರೆ.

ಪತ್ರಿಕಾ ಮಾಹಿತಿ ವಿಭಾಗ ಪ್ರಕಟಿಸಿದ ಪಟ್ಟಿಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೆಸರು ಕಾಣಿಸಿಕೊಂಡಿಲ್ಲ. ಆದರೆ ನೀತಿ ಆಯೋಗದ ವೆಬ್‌ಸೈಟ್‌ನಲ್ಲಿ ಅಮಿತಾಬ್ ಕಾಂತ್ ಹೆಸರಿದೆ. ನೀತಿ ಆಯೋಗದ ಆಡಳಿತ ಸಮಿತಿಯ ಪ್ರಥಮ ಸಭೆ ಜೂನ್ 15ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎಲ್ಲಾ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟರ್ ಗವರ್ನರ್‌ಗಳು, ಹಲವು ಕೇಂದ್ರ ಸಚಿವರು ಹಾಗೂ ಹಿರಿಯ ಸರಕಾರಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆರ್ಥಿಕ ಕ್ಷೇತ್ರ, ಕೃಷಿ ಕ್ಷೇತ್ರ ಹಾಗೂ ಭದ್ರತೆಗೆ ಸಂಬಂಧಿಸಿದ ಮಹತ್ವದ ಅಂಶಗಳು ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News