ಮಾಲೆಂಗಾವ್ ಸ್ಫೋಟ ಪ್ರಕರಣ: ಕೊನೆಗೂ ನ್ಯಾಯಾಲಯಕ್ಕೆ ಹಾಜರಾದ ಪ್ರಜ್ಞಾಗೆ ನ್ಯಾಯಾಧೀಶರು ಕೇಳಿದ್ದೇನು?

Update: 2019-06-07 16:38 GMT

ಮುಂಬೈ,ಜೂ.7: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು 2008ರ ಮಾಲೆಂಗಾವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಇದಕ್ಕೂ ಮುನ್ನ ಇದೇ ವಾರದಲ್ಲಿ ಅವರು ಎರಡು ಬಾರಿ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರು.

ವಿಶೇಷ ಎನ್‌ಐಎ ನ್ಯಾಯಾಧೀಶ ವಿ.ಎಸ್.ಪಡಲ್ಕರ್ ಅವರ ಎದುರು ಕಟಕಟೆಗೆ ಬರುವಂತೆ ಠಾಕೂರ್‌ಗೆ ಸೂಚಿಸಿದಾಗ ಅಲ್ಲಿ ತನ್ನ ಬೆಂಬಲಿಗರು ಹಾಸಿದ್ದ ಕೆಂಪು ಬಣ್ಣದ ಬಟ್ಟೆಯ ಮೇಲೆ ಆಸೀನರಾದರು.

‘‘ 116 ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದೆ ಮತ್ತು ಸ್ಫೋಟ ಸಂಭವಿಸಿದ್ದು ರುಜುವಾತಾಗಿದೆ. ಅದನ್ನು ಯಾರು ನಡೆಸಿದ್ದರು ಎಂದು ನಾನು ಪ್ರಶ್ನಿಸುತ್ತಿಲ್ಲ .2008,ಸೆ.29ರಂದು ಮಾಲೆಗಾಂವದಲ್ಲಿ ಸ್ಫೋಟ ಸಂಭವಿಸಿದ್ದು ನಿಮಗೆ ಗೊತ್ತಿದೆಯೇ ?’’ಎಂಬ ನ್ಯಾಯಾಧೀಶರ ಪ್ರಶ್ನೆಗೆ ಠಾಕೂರ್ ‘ನನಗೆ ಗೊತ್ತಿಲ್ಲ’ಎಂದು ಉತ್ತರಿಸಿದರು.

ಕನಿಷ್ಠ ವಾರಕ್ಕೊಮ್ಮೆ ನ್ಯಾಯಾಲಯದಲ್ಲಿ ಹಾಜರಾಗಬೇಕು ಎಂಬ ಷರತ್ತನ್ನು ಠಾಕೂರ್‌ಗೆ ವಿಧಿಸಲಾಗಿದ್ದು,ಸಂಸದೆಯಾಗಿ ಆಯ್ಕೆಗೊಂಡ ಬಳಿಕ ಇದು ನ್ಯಾಯಾಲಯದಲ್ಲಿ ಅವರ ಮೊದಲ ಹಾಜರಾತಿಯಾಗಿದೆ.

ಜೂನ್ 3 ಮತ್ತು 7ರ ನಡುವೆ ಖುದ್ದಾಗಿ ಹಾಜರಾಗುವುದರಿಂದ ವಿನಾಯತಿ ನೀಡಬೇಕೆಂದು ಠಾಕೂರ್ ಈ ಹಿಂದೆ ಮಾಡಿಕೊಂಡಿದ್ದ ಮನವಿಗಳನ್ನು ನ್ಯಾಯಾಲಯವು ತಿರಸ್ಕರಿಸಿತ್ತಾದರೂ ಅನಾರೋಗ್ಯದಿಂದಾಗಿ ಭೋಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪರ ವಕೀಲರು ಗುರುವಾರ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು,ಶುಕ್ರವಾರ ಹಾಜರಾಗಲು ಸೂಚಿಸಿತ್ತು. ತಪ್ಪಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಇದಕ್ಕೂ ಮುನ್ನ ಮಂಗಳವಾರವೂ ಠಾಕೂರ್ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರು.

ಠಾಕೂರ್ ಆಸ್ಪತ್ರೆಗೆ ದಾಖಲಾಗಿರುವುದನ್ನು ಭೋಪಾಲ ಕೇರ್ ಹಾಸ್ಪಿಟಲ್‌ನ ನಿರ್ದೇಶಕ ಡಾ.ಅಜಯ ಮೆಹ್ತಾ ಅವರು ಸುದ್ದಿಸಂಸ್ಥೆಗೆ ದೃಢಪಡಿಸಿದ್ದರು. ಆದರೆ ಗುರುವಾರ ಸ್ನಾನ ಇತ್ಯಾದಿಗಳಿಗಾಗಿ ಮನೆಗೆ ತೆರಳಲು 7ರಿಂದ 8 ಗಂಟೆಗಳ ರಜೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದರು. ಗುರುವಾರ ಭೋಪಾಲದಲ್ಲಿ ಮಹಾರಾಣಾ ಪ್ರತಾಪ್ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಠಾಕೂರ್ ಭಾಗಿಯಾಗಿದ್ದರು.

 2008ರಲ್ಲಿ ಮಾಲೆಗಾಂವದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಆರು ಜನರು ಮೃತಪಟ್ಟು ಸುಮಾರು 100 ಜನರು ಗಾಯಗೊಂಡಿದ್ದರು.ಅದೇ ವರ್ಷ ಬಂಧಿಸಲ್ಪಟ್ಟಿದ್ದ ಠಾಕೂರ್ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ,ಐಪಿಸಿ,ಶಸ್ತ್ರಾಸ್ತ್ರಗಳ ಕಾಯ್ದೆ ಮತ್ತು ಸ್ಫೋಟಕ ಸಾಮಗ್ರಿಗಳ ಕಾಯ್ದೆಯಡಿ ಆರೋಪಗಳನ್ನು ಹೇರಲಾಗಿತ್ತು.

 ನ್ಯಾಯಾಲಯವು ಮೋಕಾದಡಿ ಆರೋಪಗಳನು ಕೈಬಿಟ್ಟಿದೆಯಾದರೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ ಆರೋಪಗಳನ್ನು ಉಳಿಸಿಕೊಳ್ಳಲಾಗಿದೆ. ಸದ್ಯಕ್ಕೆ ಠಾಕೂರ್ ಆರೋಗ್ಯ ಕಾರಣಗಳಿಂದ ಜಾಮೀನಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News