1,300 ಕೋ.ರೂ.ನಿಂದ ಆರಂಭಗೊಂಡಿದ್ದ ಬ್ರಹ್ಮೋಸ್ ಇಂದು 40,000 ಕೋ.ರೂ.ಗಳ ವ್ಯವಹಾರದ ಸರದಾರ

Update: 2019-06-07 16:15 GMT

  ಹೊಸದಿಲ್ಲಿ,ಜೂ.7: ಶಬ್ದಾತೀತ ದಾಳಿ ಕ್ಷಿಪಣಿಗಳ ತಯಾರಿಕೆಗಾಗಿ ಭಾರತ ಮತ್ತು ರಶ್ಯಾಗಳ ನಡುವೆ ಸಹಭಾಗಿತ್ವದೊಂದಿಗೆ 1,300 ಕೋ.ರೂ.ಗಳ ಆರಂಭಿಕ ಬಂಡವಾಳದಲ್ಲಿ ಆರಂಭಗೊಂಡಿದ್ದ ಬ್ರಹ್ಮೋಸ್ ಎರೋಸ್ಪೇಸ್‌ನ ವ್ಯವಹಾರವು ಇಂದು 40,000 ಕೋ.ರೂ.ಗಳ ಎತ್ತರವನ್ನು ತಲುಪಿದೆ ಎಂದು ಕಂಪನಿಯ ಸಿಇಒ ಮತ್ತು ಆಡಳಿತ ನಿರ್ದೇಶಕ ಸುಧೀರ್ ಮಿಶ್ರಾ ಅವರು ಶುಕ್ರವಾರ ಇಲ್ಲಿ ತಿಳಿಸಿದರು. ಶಬ್ದಾತೀತ ಕ್ಷಿಪಣಿ ಯೋಜನೆಯಂತೆ ಭಾರತ ಮತ್ತು ರಶ್ಯಾಗಳ ನಡುವೆ ಇನ್ನಷ್ಟು ಕ್ಷೇತ್ರಗಳಲ್ಲಿ ಜಂಟಿ ಉದ್ಯಮಗಳು ಇರಬೇಕಿದ್ದವು ಎಂದರು.

ಭಾರತೀಯ ಕೈಗಾರಿಕಾ ಒಕ್ಕೂಟವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ರಶ್ಯಾ ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಸಂದರ್ಭದಲ್ಲಿ ಈ ಜಂಟಿ ಉದ್ಯಮವು ತಲೆಯೆತ್ತಿತ್ತು ಮತ್ತು ಭಾರತವು ಇನ್ನಷ್ಟು ಸಹಭಾಗಿತ್ವಗಳನ್ನು ಮಾಡಿಕೊಳ್ಳುವ ಮೂಲಕ ಆ ಸಂದರ್ಭದ ಲಾಭವೆತ್ತಬೇಕಿತ್ತು ಎಂದರು.

 ಭಾರತದ ಡಿಆರ್‌ಡಿಒ ಮತ್ತು ರಶ್ಯಾದ ಎನ್‌ಪಿಒ ಮಷಿನೋಸ್ಟ್ರೊಯೆನಿಯಾ ನಡುವೆ ಜಂಟಿ ಉದ್ಯಮವಾಗಿ 1998ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬ್ರಹ್ಮೋಸ್ ಭೂಮಿ,ವಾಯು ಮತ್ತು ಹಡಗುಗಳು ಹಾಗೂ ಜಲಾಂತರ್ಗಾಮಿ ಹೀಗೆ ಎಲ್ಲ ವೇದಿಕೆಗಳಿಂದಲೂ ಬಳಸಬಹುದಾದ ಕ್ಷಿಪಣಿಗಳನ್ನು ಉತ್ಪಾದಿಸುತ್ತಿದೆ.

ಈವರೆಗೂ ಕಂಪನಿಯು ನೇರ ಮತ್ತು ಪರೋಕ್ಷ ತೆರಿಗೆಗಳ ರೂಪದಲ್ಲಿ 4,000 ಕೋ.ರೂ.ಅಧಿಕ ಮೊತ್ತವನ್ನು ಸರಕಾರಕ್ಕೆ ಪಾವತಿಸಿದೆ ಎಂದು ಮಿಶ್ರಾ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬ್ರಹ್ಮೋಸ್ ಖರೀದಿಗೆ ವಿದೇಶಗಳು ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ತಿಳಿಸದರಾದರೂ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಬ್ರಹ್ಮೋಸ್ ಇಂದು 200ಕ್ಕೂ ಹೆಚ್ಚಿನ ಕೈಗಾರಿಕೆಗಳನ್ನು ತನ್ನ ಉದ್ಯಮ ಪಾಲುದಾರರನ್ನಾಗಿ ಹೊಂದಿದೆ ಹಾಗೂ ನೇರ ಮತ್ತು ಪರೋಕ್ಷವಾಗಿ 20,000ಕ್ಕೂ ಹೆಚ್ಚು ಜನರಿಗೆ ಉದ್ಯೋಗಗಳನ್ನು ನೀಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News