ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಮಮತಾ ನಿರಾಕರಣೆ

Update: 2019-06-07 17:12 GMT

ಕೋಲ್ಕತಾ, ಜೂ. 7: ಜೂನ್ 15ರಂದು ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿ ಸಭೆಗೆ ತಾನು ಹಾಜರಾಗುವುದಿಲ್ಲ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ.

ಮೂರು ಪುಟಗಳ ಪತ್ರದಲ್ಲಿ ಮಮತಾ ಬ್ಯಾನರ್ಜಿ ಈ ವಿಚಾರವನ್ನು ಮೋದಿ ಅವರಿಗೆ ತಿಳಿಸಿದ್ದಾರೆ. ಯೋಜನಾ ಆಯೋಗವನ್ನು ಮರು ನೇಮಿಸಿದ ಬಳಿಕ ನಡೆಯುತ್ತಿರುವ ಮೊದಲ ನಿರ್ಣಾಯಕ ಸಭೆಯಲ್ಲಿ ಪಾಲ್ಗೊಳ್ಳದೇ ಇರಲು ಮಮತಾ ಬ್ಯಾನರ್ಜಿ 9 ವಿಷಯಗಳನ್ನು ಪಟ್ಟಿ ಮಾಡಿ ಹೇಳಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ರದ್ದುಗೊಳಿಸಿದ ಯೋಜನಾ ಆಯೋಗ ಹಾಗೂ ನೀತಿ ಆಯೋಗದ ನಡುವಿನ ವ್ಯತ್ಯಾಸವನ್ನು ಮಮತಾ ಬ್ಯಾನರ್ಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಂಪನ್ಮೂಲ ಸಂಗ್ರಹ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಯೋಜನಾ ಆಯೋಗ ರಾಜ್ಯ ಸರಕಾರಗಳೊಂದಿಗೆ ನಿರಂತರ ಸಭೆ ನಡೆಸುತ್ತಿತ್ತು ಎಂದು ಅವರು ಹೇಳಿದ್ದಾರೆ.

ಯೋಜನಾ ಆಯೋಗವನ್ನು ರದ್ದುಗೊಳಿಸಿ ಆ ಸ್ಥಾನದಲ್ಲಿ ನೀತಿ ಆಯೋಗವನ್ನು ಆರಂಭಿಸಿರುವುದಕ್ಕೆ ಅವರು ಅಸಮಾಧಾನ ಮತ್ತೆ ವ್ಯಕ್ತಪಡಿಸಿದ್ದಾರೆ. ಯೋಜನಾ ಆಯೋಗದ ಬದಲಿಗೆ 2015 ಜೂನ್ 1ರಂದು ಅಸ್ತಿತ್ವಕ್ಕೆ ತರಲಾದ ನೀತಿ ಆಯೋಗಕ್ಕೆ ರಾಜ್ಯಗಳಿಗೆ ನೆರವಾಗುವ ಯಾವುದೇ ಆರ್ಥಿಕ ಅಧಿಕಾರವೂ ಇಲ್ಲದಿರುವುದು ದುರಾದೃಷ್ಟಕರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನೀತಿ ಆಯೋಗಕ್ಕೆ ಯಾವುದೇ ಹಣಕಾಸಿನ ಅಧಿಕಾರ ಹಾಗೂ ರಾಜ್ಯ ಸರಕಾರದ ಯೋಜನೆಗೆ ನೆರವು ನೀಡುವ ಅಧಿಕಾರ ಇಲ್ಲ. ಯಾವುದೇ ಹಣಕಾಸಿನ ಅಧಿಕಾರ ಇಲ್ಲದ ನೀತಿ ಆಯೋಗದ ಸಭೆಗೆ ಹಾಜರಾಗುವುದು ಫಲಪ್ರದವಲ್ಲ ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News