ಮಗು ಅಪಹರಿಸಿ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2019-06-07 17:51 GMT

ಲಕ್ನೊ, ಜೂ.7: ಮಗುವನ್ನು ಹತ್ಯೆ ಮಾಡಿದ ಆರೋಪದಲ್ಲಿ ಉತ್ತರಪ್ರದೇಶದ ಆಲಿಗಢ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಮೇ 31ರಂದು ಎರಡೂವರೆ ವರ್ಷದ ಬಾಲಕಿಯನ್ನು ಅಪಹರಿಸಿರುವ ಬಗ್ಗೆ ಆಲಿಗಢ ಜಿಲ್ಲೆಯ ಟಪ್ಪಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎರಡು ದಿನದ ಬಳಿಕ ಬಾಲಕಿಯ ಮೃತದೇಹ ತ್ಯಾಜ್ಯದ ರಾಶಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಝಾಹಿದ್ ಎಂಬಾತ ತನಗೆ 10 ಸಾವಿರ ರೂ. ನೀಡಬೇಕಿದ್ದು ಈ ವಿಷಯದಲ್ಲಿ ಆತನೊಂದಿಗೆ ಜಗಳವಾಗಿರುವ ಬಗ್ಗೆ ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಟಪ್ಪಾಲ್ ನಗರದ ನಿವಾಸಿಗಳಾದ ಝಾಹಿದ್ ಮತ್ತು ಅಸ್ಲಾಂರನ್ನು ಬಂಧಿಸಲಾಗಿದೆ.

   ಹಣದ ವಿಚಾರಕ್ಕೆ ಸಂಬಂಧಿಸಿ ಬಾಲಕಿಯ ತಂದೆಯೊಂದಿಗೆ ಇದ್ದ ವಿವಾದದ ಹಿನ್ನೆಲೆಯಲ್ಲಿ ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಮರಣೋತ್ತರ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಕ್ಷಿಪ್ರ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವಂತೆ ಕ್ರಮ ಕೈಗೊಳ್ಳಲಿದ್ದೇವೆ . ಪ್ರಕರಣಕ್ಕೆ ಸಂಬಂಧಿಸಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಆಲಿಗಢ ಹಿರಿಯ ಪೊಲೀಸ್ ಅಧೀಕ್ಷಕ ಅಕ್ಷಯ್ ಕುಲ್ಹಾರಿ ಹೇಳಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಆ್ಯಸಿಡ್ ಎರಚಲಾಗಿದೆ. ಆಕೆಯ ಕಣ್ಣಿನ ಗುಡ್ಡೆಗಳನ್ನು ಕೀಳಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳನ್ನು ನಂಬಬಾರದು ಎಂದು ಅವರು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News