ಉ.ಪ್ರದೇಶ:ಧೂಳುಮಿಶ್ರಿತ ಬಿರುಗಾಳಿ, ಸಿಡಿಲಿಗೆ 26 ಬಲಿ,57 ಜನರಿಗೆ ಗಾಯ

Update: 2019-06-07 17:55 GMT

ಲಕ್ನೋ,ಜೂ.7: ಗುರುವಾರ ರಾತ್ರಿ ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ ಭಾರೀ ಧೂಳುಮಿಶ್ರಿತ ಬಿರುಗಾಳಿ ಮತ್ತು ಸಿಡಿಲಿನ ಅಬ್ಬರಕ್ಕೆ ಕನಿಷ್ಠ 26 ಜನರು ಸಾವನ್ನಪ್ಪಿದ್ದು,57 ಜನರು ಗಾಯಗೊಂಡಿದ್ದಾರೆ. ಮನೆಗಳು ಮತ್ತು ಗೋಡೆಗಳು ಕುಸಿದು ಬಿದ್ದಿದ್ದು,ನೂರಾರು ಮರಗಳು ಉರುಳಿ ಬಿದ್ದಿವೆ. ಭಾರೀ ಪ್ರಮಾಣದಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ.

ಮೈನಪುರಿ ಜಿಲ್ಲೆಯಲ್ಲಿ ತೀವ್ರ ಹಾನಿ ಸಂಭವಿಸಿದೆ. ಅಲ್ಲಿ ಗೋಡೆ ಕುಸಿತ ಮತ್ತು ಸಿಡಿಲಿನ ಪ್ರತ್ಯೇಕ ಪ್ರಕರಣಗಳಲ್ಲಿ ಆರು ಜನರು ಸಾವನ್ನಪ್ಪಿದ್ದು,41 ಜನರು ಗಾಯಗೊಂಡಿದ್ದಾರೆ. ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಬಿರುಗಾಳಿಯ ಅಬ್ಬರಕ್ಕೆ ಕುಸಿದು ಬಿದ್ದ ಮಣ್ಣಿನ ಮನೆಗಳಲ್ಲಿ ನಿದ್ರಿಸಿದ್ದರು. ಗುಡುಗು-ಸಿಡಿಲಿನ ಜೊತೆಗೆ ಮಳೆಯೂ ಸುರಿದಿದ್ದು ಮನೆಗಳು ಕುಸಿಯಲು ಕಾರಣವಾಗಿತ್ತು. ಹಲವಾರು ಕಡೆಗಳಲ್ಲಿ ರಸ್ತೆಬದಿಗಳಲ್ಲಿ ಅಳವಡಿಸಿದ್ದ ಬೃಹತ್ ಫಲಕಗಳು ಮೈಮೇಲೆ ಬಿದ್ದು ಕೆಲವರು ಗಾಯಗೊಂಡಿದ್ದಾರೆ.

ಗುರುವಾರ ತಡಸಂಜೆಯಿಂದಲೇ ಧೂಳು ಮಿಶ್ರಿತ ಬಿರುಗಾಳಿ ಆರಂಭವಾಗಿದ್ದು, 31 ಜಾನುವಾರುಗಳು ಸಾವನ್ನಪ್ಪಿವೆ. 16 ಮನೆಗಳೂ ಹಾನಿಗೀಡಾಗಿವೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲ.ರೂ.ಗಳ ಆರ್ಥಿಕ ನೆರವನ್ನು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News