7ನೇ ವ್ಯಕ್ತಿಯ ದೇಹದ್ರವದ ಮಾದರಿಯಲ್ಲಿ ನಿಪಾಹ್ ವೈರಸ್ ಪತ್ತೆಯಾಗಿಲ್ಲ

Update: 2019-06-07 18:03 GMT

ತಿರುವನಂತಪುರ, ಜೂ. 7: ನಿಪಾಹ್ ಸೋಂಕು ತಗಲಿರುವುದಾಗಿ ಶಂಕಿಸಲಾದ 7ನೇ ವ್ಯಕ್ತಿಯ ದೇಹ ದ್ರವದ ಮಾದರಿಯಲ್ಲಿ ನಿಪಾಹ್ ವೈರಸ್ ಕಂಡು ಬಂದಿಲ್ಲ ಎಂದು ಆರೋಗ್ಯ ಸಚಿವೆ ಶೈಲಜಾ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಭೇಟಿಯಾಗಿ ಶೈಲಜಾ ಮಾತುಕತೆ ನಡೆಸಿದರು.

 ರಾಜ್ಯದಲ್ಲಿ ಜುಲೈ 15ರ ವರೆಗೆ ಮುನ್ನೆಚ್ಚರಿಕೆ ಮುಂದುವರಿಯಲಿದೆ. ಕಳವಳ ಪಡುವ ಯಾವುದೇ ಅಗತ್ಯ ಇಲ್ಲ. ಕೊಚ್ಚಿಯಲ್ಲಿ 23 ವರ್ಷದ ಯುವಕ ನಿಪಾಹ್ ವೈರಸ್ ಸೋಂಕಿಗೆ ಒಳಗಾಗಿರುವ ಶಂಕೆ ವ್ಯಕ್ತವಾದ ಬಳಿಕ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಕರ್ನಾಟಕದ 8 ಜಿಲ್ಲೆಗಳು ಹಾಗೂ ತಮಿಳುನಾಡಿನ 7 ಜಿಲ್ಲೆಗಳಲ್ಲಿ ಬುಧವಾರ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಎರ್ನಾಕುಲಂನ ಸರಕಾರಿ ವೈದ್ಯಕೀಯ ಕಾಲೇಜಿನ ಪ್ರತ್ಯೇಕ ವಾರ್ಡ್‌ನಲ್ಲಿ ನಿಪಾಹ್ ಸೋಂಕು ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶೈಲಜಾ ಹೇಳಿದ್ದಾರೆ. ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ ಜನರಿಗೆ ಸೂಚಿಸಿದೆ. 23 ವರ್ಷದ ವಿದ್ಯಾರ್ಥಿಯ ಸಂಪರ್ಕ ಹೊಂದಿದ್ದ ಒಟ್ಟು 316 ಜನರನ್ನು ನಿಗಾದಲ್ಲಿ ಇರಿಸಲಾಗಿದೆ.

316 ಮಂದಿಯಲ್ಲಿ 33 ಮಂದಿಯನ್ನು ಅತಿ ಅಪಾಯ ವರ್ಗದಲ್ಲಿ ಗುರುತಿಸಲಾಗಿದೆ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ರಾಜನ್ ಎನ್. ಖೋಬ್ರಗಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News