​ಮೂರರ ಬಾಲೆಯ ದೇಹದಾನ ಮಾಡಿದ ಪೋಷಕರು

Update: 2019-06-08 05:18 GMT

ಜೈಪುರ: ಹೃದ್ರೋಗದಿಂದ ಸಾವನ್ನಪ್ಪಿದ ಮೂರು ವರ್ಷದ ಬಾಲಕಿಯ ದೇಹವನ್ನು ಪೋಷಕರು ಎಐಐಎಂಎಸ್‌ಗೆ ದಾನ ಮಾಡಿದ ಅಪರೂಪದ ಘಟನೆ ವರದಿಯಾಗಿದೆ. ದೇಹದಾನಕ್ಕೆ ಹಿಂದೇಟು ಹಾಕುತ್ತಿರುವ ಭಾರತದಲ್ಲಿ ಬಹುಶಃ ಇಷ್ಟು ಪುಟ್ಟ ಮಗುವಿನ ದೇಹದಾನಕ್ಕೆ ಪೋಷಕರು ಮುಂದಾಗಿರುವುದು ಇದೇ ಮೊದಲು.

ಜೋಧಪುರ ಎಐಐಎಂಎಸ್‌ನಲ್ಲಿ ಗುರುವಾರ ಈ ಮಗು ಮೃತಪಟ್ಟಿತ್ತು. ಈ ಮಗುವಿನ ದೇಹವನ್ನು ಪೋಷಕರು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ಪುಟ್ಟ ಬಾಲಕಿ ಜ್ಯೋತಿಯ ತಂದೆ ಉಮೈದ್ ಸಿಂಗ್, ಜೋಧಪುರ ರಸ್ತೆ ಸಾರಿಗೆ ಡಿಪೋಟದಲ್ಲಿ ಉಪ ಸಹಾಯಕ ವ್ಯವಸ್ಥಾಪಕ. ದುರದೃಷ್ಟವಶಾತ್ ಪುತ್ರಿ ಮೃತಪಟ್ಟಾಗ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಅವರು ಮುಂದಾದರು. ಆದರೆ ಅದು ಸಾಧ್ಯವಿಲ್ಲ ಎನ್ನುವುದನ್ನು ವೈದ್ಯರು ದೃಢಪಡಿಸಿದಾಗ ದೇಹ ದಾನಕ್ಕೆ ಮುಂದಾದರು.

"ನನ್ನ ಮಗುವಿನ ದೇಹ ದೇಶಕ್ಕಾಗಿ ಬಳಕೆಯಾಗುತ್ತಿದೆ ಎಂದು ತಿಳಿದು ಅತೀವ ಸಂತಸವಾಗಿದೆ. ಆಕೆ ಸದಾ ಜೀವಂತ ಇರಲು ನಾವು ಬಯಸಿದ್ದೆವು. ಆದ್ದರಿಂದ ಪತ್ನಿ ರಾಜು ಕನ್ವರ್ ಜತೆ ಚರ್ಚಿಸಿ, ಮಗುವಿನ ಅಂಗಾಂಗ ದಾನಕ್ಕೆ ಮುಂದಾದೆವು. ಈ ಮೂಲಕ ಬೇರೆಯವರ ದೇಹದಲ್ಲಿ ಆಕೆ ಜೀವಂತ ಇರಲಿ ಎನ್ನುವುದು ನಮ್ಮ ಆಶಯವಾಗಿತ್ತು. ಆದರೆ ಈ ಆಸ್ಪತ್ರೆಯಲ್ಲಿ ಅಂಗಾಂಗ ದಾನಕ್ಕೆ ಸೌಲಭ್ಯ ಇಲ್ಲದ ಕಾರಣ ಬೇಸರದಿಂದ ಕೊನೆಗೆ ಎಂಬಿಬಿಎಸ್ ವಿದ್ಯಾರ್ಥಿಗಳ ಬಳಕೆಗಾಗಿ ಮಗುವಿನ ದೇಹ ದಾನ ಮಾಡಲು ನಿರ್ಧರಿಸಿದೆವು" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News