ಮತ್ತೆ ಜಸ್ಟಿಸ್ ಖುರೇಶಿಗೆ ಸಿಜೆ ಹುದ್ದೆ ನಿರಾಕರಿಸಿದ ಕೇಂದ್ರ

Update: 2019-06-08 07:15 GMT
ಜಸ್ಟಿಸ್ ಖುರೇಶಿ

ಹೊಸದಿಲ್ಲಿ : ಮಧ್ಯ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ  ಜಸ್ಟಿಸ್ ಎ.ಎ. ಖುರೇಶಿ ಅವರನ್ನು ನೇಮಿಸುವಂತೆ ಸುಪ್ರೀಂ ಕೋರ್ಟಿನ ಕೊಲೀಜಿಯಂ ಮೇ 10ರಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದರೂ ಇದನ್ನು ನಿರ್ಲಕ್ಷಿಸಿರುವ ಕೇಂದ್ರ ಶುಕ್ರವಾರ ಜಸ್ಟಿಸ್ ರವಿ ಶಂಕರ್ ಝಾ ಅವರನ್ನು ಮಧ್ಯ ಪ್ರದೇಶ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ನೇತೃತ್ವದ ಕೊಲೀಜಿಯಂ ಮೇ 10ರಂದು  ಜಸ್ಟಿಸ್ ಖುರೇಶಿ ಅವರ ಹೆಸರು ಸೂಚಿಸಿ ಸದ್ಯ ವರ್ಗಾವಣೆಗೊಂಡು ಬಾಂಬೆ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಗುಜರಾತ್ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವುದರಿಂದ ಮಧ್ಯ ಪ್ರದೇಶದ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಸೇಠ್ ಅವರ ನಿವೃತ್ತಿಯ ನಂತರ ಅವರ ಸ್ಥಾನ ತುಂಬಲು ಅತ್ಯಂತ ಅರ್ಹರೆಂದೂ ಹೇಳಿತ್ತು.

ಆದರೆ ಇದು ಸರಕಾರಕ್ಕೆ ಒಪ್ಪಿಗೆಯಾಗಿಲ್ಲವೆಂದು ತಿಳಿದು ಬಂದಿದ್ದು  ಸಂವಿಧಾನದ 223ನೇ ವಿಧಿಯನ್ನು ಅನ್ವಯಿಸಿ ಜಸ್ಟಿಸ್ ಝಾ ಅವರನ್ನು ಮಧ್ಯ ಪ್ರದೇಶದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿದೆ.

ಜಸ್ಟಿಸ್ ಝಾ ಅವರು ಮಧ್ಯ ಪ್ರದೇಶ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ ಹಾಗೂ ಜೂನ್ 10ರಂದು ಜಸ್ಟಿಸ್ ಝಾ ನಿವೃತ್ತರಾಗುತ್ತಿದ್ದಂತೆಯೇ ಅಧಿಕಾರ ಸ್ವೀಕರಿಸುತ್ತಾರೆಂದು ಕೇಂದ್ರ ಹೇಳಿದೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಜಸ್ಟಿಸ್ ಖುರೇಶಿ ಅವರನ್ನು ಬಾಂಬೆ ಹೈಕೋರ್ಟಿಗೆ ವರ್ಗಾವಣೆಗೊಳಿಸಿದಾಗ ಗುಜರಾತ್ ಹೈಕೋರ್ಟಿನ ವಕೀಲರು ಪ್ರತಿಭಟಿಸಿದ್ದರು. ಗುಜರಾತ್ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದ ಅವರನ್ನು ಗುಜರಾತ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸುಭಾಶ್ ರೆಡ್ಡಿ ಅವರ ಪದೋನ್ನತಿ ನಂತರ ಅವರ ಸ್ಥಾನಕ್ಕೆ ತರುವ ಬದಲು ವರ್ಗಾಯಿಸಿದ್ದು ವಕೀಲರಲ್ಲಿ ಆಕ್ರೋಶ ಮೂಡಿಸಿತ್ತು.

ಸರಕಾರ ಅದಾಗಲೇ ಜಸ್ಟಿಸ್ ಎ ಎಸ್ ದವೆ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಸಿದರೂ ನಂತರ ಇನ್ನೊಂದು ಅಧಿಸೂಚನೆ ಹೊರಡಿಸಿ  ಜಸ್ಟಿಸ್ ಖುರೇಶಿ ಅವರು ಬಾಂಬೆ ಹೈಕೋರ್ಟಿನಲ್ಲಿ ಅಧಿಕಾರ ವಹಿಸುವ ಅವಧಿಯ ತನಕ ಅವರನ್ನು ಗುಜರಾತ್ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿಸಿತ್ತು.

ಮೇ 10ರಂದು ಕೊಲೀಜಿಯಂ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಗೆ ಮೂವರು ಇತರರ ಹೆಸರುಗಳನ್ನು ಶಿಫಾರಸು ಮಾಡಿದ್ದರೂ ಅವುಗಳಲ್ಲಿ ಒಂದಕ್ಕೆ ಕೇಂದ್ರ ಅನುಮೋದನೆ ನೀಡಿದ್ದು ಇತರ ಎರಡು ಶಿಫಾರಸುಗಳು ಇನ್ನೂ ಅನುಮೋದನೆಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News