‘ದಿ ಕ್ವಿಂಟ್’ ಸಂಪಾದಕ ರಾಘವ ಬಹ್ಲ್ ವಿರುದ್ಧ ಅಕ್ರಮ ಹಣ ವಹಿವಾಟು ಪ್ರಕರಣ ದಾಖಲು

Update: 2019-06-08 14:05 GMT

 ಹೊಸದಿಲ್ಲಿ,ಜೂ.8: ಜಾರಿ ನಿರ್ದೇಶನಾಲಯ (ಈ.ಡಿ.)ವು ಮಾಧ್ಯಮ ಉದ್ಯಮಿ ರಾಘವ ಬಹ್ಲ್ ವಿರುದ್ಧ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ. ಲಂಡನ್‌ನಲ್ಲಿ ಆಸ್ತಿ ಖರೀದಿಗೆ ಬಳಕೆಯಾಗಿದ್ದ ಸುಮಾರು 2.45 ಕೋ.ರೂ.ಗಳನ್ನು ಬಹಿರಂಗಗೊಳಿಸದ್ದಕ್ಕಾಗಿ ಆದಾಯ ತೆರಿಗೆ ಇಲಾಖೆಯು ಬಹ್ಲ್ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಈ ಪ್ರಕರಣವು ಆಧರಿಸಿದೆ. ಬಹ್ಲ್ ಒಡೆತನದ ಕ್ವಿಂಟಿಲಿಯನ್ ಮೀಡಿಯಾವು ಸುದ್ದಿ ಜಾಲತಾಣ ‘ದಿ ಕ್ವಿಂಟ್’ ಅನ್ನು ನಡೆಸುತ್ತಿದೆ. ಕಳೆದ ವಾರ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿ ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿದ್ದ ಬಹ್ಲ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರವನ್ನು ಬರೆದಿದ್ದು, ಎಲ್ಲ ತೆರಿಗೆಗಳನ್ನು ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ಪಾವತಿಸಿದ್ದರೂ,ಯಾವುದೇ ತಪ್ಪು ಮಾಡಿರದಿದ್ದರೂ ತನ್ನನ್ನು ಬೇಟೆಯಾಡುತ್ತಿರುವಂತೆ ಭಾಸವಾಗುತ್ತಿದೆ. ಅಲ್ಲದೆ ತಾನು ಅಥವಾ ತನ್ನ ಉದ್ಯಮಗಳು ಯಾವುದೇ ಸಾಲ ಬಾಕಿಯನ್ನು ಉಳಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಲಂಡನ್‌ನಲ್ಲಿ ಆಸ್ತಿ ಖರೀದಿಸಲು ಪಾವತಿಸಿದ್ದ 2.73 ಲಕ್ಷ ಪೌಂಡ್ ಹಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು 2019,ಮೇ 13ರಷ್ಟು ಹಿಂದೆಯೇ ತಾನು ತನ್ನ ಅಧಿಕೃತ ಪ್ರತಿನಿಧಿಯ ಮೂಲಕ ಒದಗಿಸಿದ್ದೇನೆ. ಈ ಹಣ ಪಾವತಿಯ ಕುರಿತು ಮಾಹಿತಿಯನ್ನು ಬಹಿರಂಗಗೊಳಿಸುವಲ್ಲಿ ವಿಫಲನಾಗಿದ್ದೇನೆ ಎಂದು ತೆರಿಗೆ ಇಲಾಖೆಯು ಹೇಳಿದ ಬಳಿಕ ಈ ವಿವರಗಳನ್ನು ತಾನು ಸ್ಪಷ್ಟಪಡಿಸಿದ್ದೇನೆ. ಮೇ 1ರಂದು ತನಗೆ ಅವರು ಜಾರಿಗೊಳಿಸಿದ್ದ ಎರಡು ಶೋಕಾಸ್ ನೋಟಿಸ್‌ಗಳಲ್ಲಿ ಈ ಹಣವನ್ನು ಕಪ್ಪುಹಣವೆಂದು ಅವರು ಉಲ್ಲೇಖಿಸಿದ್ದರು ಎಂದಿದ್ದಾರೆ.

ತಾನು ಮತ್ತು ತನ್ನ ಪತ್ನಿ ರಿತು ಕಪೂರ್ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳಲ್ಲಿ ಎಲ್ಲ ವಿವರಗಳನ್ನು ಬಹಿರಂಗಗೊಳಿಸಿದ್ದೇವೆ ಮತ್ತು ತಾನೀಗಾಗಲೇ ಶೋಕಾಸ್ ನೋಟಿಸ್‌ಗಳನ್ನು ಮತ್ತು ನಂತರದ ಕ್ರಮಗಳನ್ನು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ ಎಂದು ಪತ್ರದಲ್ಲಿ ಬರೆದಿರುವ ಅವರು,ಕೇವಲ ತನ್ನೊಬ್ಬನ ಪರವಾಗಿ ಹಸ್ತಕ್ಷೇಪ ಕೋರಿ ತಾನು ಈ ಪತ್ರವನ್ನು ಬರೆಯುತ್ತಿಲ್ಲ,ಅಕ್ರಮ ಹಣ ವಹಿವಾಟುದಾರರು ಮತ್ತು ಕಪ್ಪುಹಣದ ಖದೀಮರನ್ನು ಪತ್ತೆ ಹಚ್ಚುವ ಅಭಿಯಾನವು ಅಮಾಯಕರನ್ನು ಬೇಟೆಯಾಡಲು ಬಳಕೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.

 ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬಹ್ಲ್ ಅವರ ಕಚೇರಿ ಮತ್ತು ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಲೇಖನವೊಂದನ್ನು ಪ್ರಕಟಿಸಿದ್ದ ಕ್ವಿಂಟ್, ಈ ದಾಳಿ ಸಮೀಕ್ಷೆಯೋ ಶೋಧ ಕಾರ್ಯಾಚರಣೆಯೋ ಎನ್ನುವುದನ್ನು ಖಚಿತಪಡಿಸಲು ಆದಾಯ ತೆರಿಗೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇದು ಖಂಡಿತ ವಿಶ್ವಾಸವನ್ನು ಮೂಡಿಸುವುದಿಲ್ಲ ಮತ್ತು ಭಿನ್ನ ಉದ್ದೇಶಕ್ಕಾಗಿ ದಾಳಿ ನಡೆದಿದೆ ಹಾಗೂ ಭಿನ್ನಾಭಿಪ್ರಾಯದ ಧ್ವನಿಗಳನ್ನು ಉಡುಗಿಸುವ ಒಟ್ಟಾರೆ ಸಂದೇಶದ ಭಾಗವಾಗಿದೆ ಎಂಬ ಪ್ರಾಮಾಣಿಕ ಶಂಕೆಗಳನ್ನುಂಟು ಮಾಡಿದೆ ಎಂದು ಬರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News