ಕೇಂದ್ರ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾಗೆ ಸೇವಾ ವಿಸ್ತರಣೆ ನೀಡಲು 60 ವರ್ಷಗಳಷ್ಟು ಹಳೆಯ ನಿಯಮಕ್ಕೆ ತಿದ್ದುಪಡಿ

Update: 2019-06-08 15:00 GMT

ಹೊಸದಿಲ್ಲಿ, ಜೂ.8: ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹರ ಸೇವಾವಧಿಯನ್ನು ಮೂರು ತಿಂಗಳಾವಧಿಗೆ ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಸರಕಾರ 60 ವರ್ಷದ ಹಿಂದಿನ ನಿಯಮಕ್ಕೆ ತಿದ್ದುಪಡಿ ಮಾಡಿದೆ.

ಸಂಪುಟ ಕಾರ್ಯದರ್ಶಿಯನ್ನು 2 ವರ್ಷದ ನಿಗದಿತ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಖಿಲ ಭಾರತ ಸೇವಾ (ನಿಧನ- ಮತ್ತು ನಿವೃತ್ತಿ- ಸೌಲಭ್ಯಗಳು) ನಿಯಮ, 1958ರ ಪ್ರಕಾರ ಸರಕಾರವು ಸಂಪುಟ ಕಾರ್ಯದರ್ಶಿಯ ಸೇವೆಯನ್ನು ನಾಲ್ಕು ವರ್ಷದ ಮಿತಿಗೆ ಒಳಪಟ್ಟು ವಿಸ್ತರಿಸಬಹುದಾಗಿದೆ. ಶುಕ್ರವಾರ ಪ್ರಕಟಿಸಿದ ತಿದ್ದುಪಡಿ ಮಾಡಲಾದ ನಿಯಮದ ಪ್ರಕಾರ , ಸಂಪುಟ ಕಾರ್ಯದರ್ಶಿಯ ಸೇವೆಯನ್ನು ನಾಲ್ಕು ವರ್ಷದ ಬಳಿಕವೂ ಮೂರು ತಿಂಗಳಾವಧಿಗೆ ವಿಸ್ತರಿಸಬಹುದಾಗಿದೆ. ಸಿನ್ಹರನ್ನು ಸಂಪುಟ ಕಾರ್ಯದರ್ಶಿಯನ್ನಾಗಿ 2015ರ ಮೇ ತಿಂಗಳಿನಲ್ಲಿ ಎರಡು ವರ್ಷಾವಧಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಬಳಿಕ ಇದನ್ನು 2 ಬಾರಿ ವಿಸ್ತರಿಸಲಾಗಿದೆ.

ಇದರೊಂದಿಗೆ ದೀರ್ಘಾವಧಿಗೆ ಸಂಪುಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಸಿನ್ಹಾರದ್ದಾಗಿದೆ. ಇದಕ್ಕೂ ಮುನ್ನ ವೈಎನ್ ಸುಧಾಕರನ್ 1953ರ ಮೇ 14ರಿಂದ 1957ರ ಜುಲೈ 31ರವರೆಗೆ ಸಂಪುಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವುದು ಇದುವರೆಗಿನ ದಾಖಲೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News