ಯೋಗ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುವ ಮಾಧ್ಯಮ ಸಂಸ್ಥೆಗಳಿಗೆ ಸರಕಾರದಿಂದ ಪ್ರಶಸ್ತಿ: ಜಾವ್ಡೇಕರ್

Update: 2019-06-08 17:17 GMT

ಹೊಸದಿಲ್ಲಿ, ಜೂ. 8: ಯೋಗದ ಕುರಿತು ಜಾಗೃತಿ ಮೂಡಿಸುವಲ್ಲಿ ಕೊಡುಗೆ ನೀಡುವ ಮಾಧ್ಯಮ ಸಂಸ್ಥೆಗಳನ್ನು ಗೌರವಿಸಲು ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಶನಿವಾರ ಹೇಳಿದ್ದಾರೆ.

ಸುದ್ದಿ ಸಂಸ್ಥೆ, ಟಿ.ವಿ. ಹಾಗೂ ರೇಡಿಯೊಗಳಿಗೆ ತಲಾ 11ರಂತೆ 33 ಪ್ರಶಸ್ತಿಗಳನ್ನು ನೀಡಲಾಗುವುದು. ಎಲ್ಲ 23 ಭಾಷೆಗಳ ಪ್ರವೇಶವನ್ನು 6 ಸದಸ್ಯರ ಜೂರಿ ಪರಿಗಣಿಸಲಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ಷಿಕವಾಗಿ ಜೂನ್ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನವನ್ನು ಪರಿಗಣಿಸಿ ಜೂನ್ 10ರಿಂದ 25ರ ವರೆಗೆ ಯೋಗದ ಕುರಿತು ಮಾದ್ಯಮ ಅಭಿಯಾನ ನಡೆಯಲಿದೆ.

ಯೋಗ ದಿನದ ಅಂಗವಾಗಿ ರಾಷ್ಟ್ರೀಯ ಕಾರ್ಯಕ್ರಮ ನಡೆಸಲು ದಿಲ್ಲಿ, ಶಿಮ್ಲಾ, ಮೈಸೂರು, ಅಹ್ಮದಾಬಾದ್ ಹಾಗೂ ರಾಂಚಿಯನ್ನು ಸರಕಾರ ಈ ವರ್ಷ ಪಟ್ಟಿ ಮಾಡಿದೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ಡೆಹ್ರಾಡೂನ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು 2015ರಲ್ಲಿ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 191 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News