ಇವಿಎಂ ಸಾಗಾಟಕ್ಕೆ ಜಿಪಿಎಸ್ ನಿಗಾ ಆದೇಶಿಸಿದ್ದ ಚುನಾವಣಾ ಆಯೋಗದ ಬಳಿ ಅದರ ಮಾಹಿತಿಯೇ ಇಲ್ಲ !

Update: 2019-06-08 17:20 GMT

ಹೊಸದಿಲ್ಲಿ, ಜೂ. 8: ಇವಿಎಂಗಳನ್ನು ಸಾಗಿಸುವ ಎಲ್ಲಾ ವಾಹನಗಳಿಗೆ ನೈಜ ಸಮಯದ ಜಿಪಿಎಸ್ ಟ್ರ್ಯಾಕಿಂಗ್ ಅನ್ನು ಭಾರತ ಚುನಾವಣಾ ಆಯೋಗ ಕಡ್ಡಾಯಗೊಳಿಸಿತ್ತು. ಆದರೆ, ಚುನಾವಣಾ ಫಲಿತಾಂಶ ಘೋಷಣೆಗೆ ಮುನ್ನ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯ ಪ್ರಶ್ನೆಗೆ ಉತ್ತರಿಸಿದ ಚುನಾವಣಾ ಆಯೋಗ ಜಿಪಿಎಸ್ ದತ್ತಾಂಶ ಹಾಗೂ ಈ ವಾಹನಗಳ ಚಲನೆಗೆ ಸಂಬಂಧಿಸಿದ ಯಾವುದೇ ಭೌತಿಕ ರೂಪದ ಮಾಹಿತಿ ಇಲ್ಲ ಎಂದು ಹೇಳಿತ್ತು ಎಂದು thequint.com ವರದಿ ಮಾಡಿದೆ.

ಇವಿಎಂಗಳ ಭದ್ರತೆ ಹೆಚ್ಚಿಸುವ ನೂತನ ಕಠಿಣ ಕ್ರಮಗಳ ಭಾಗವಾಗಿ ನಿರ್ದಿಷ್ಟವಾಗಿ ಮತಯಂತ್ರಗಳನ್ನು ಸಾಗಿಸುವ ವಾಹನಗಳಲ್ಲಿ ಜಿಪಿಎಸ್ ಅಳವಡಿಕೆಯನ್ನು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಉಲ್ಲೇಖಿಸಿದ್ದರು. ಅನಂತರ ಜಿಪಿಎಸ್‌ಗೆ ಸಂಬಂಧಿಸಿ ಮಾಹಿತಿ ಲಭ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ.

2019ರ ಲೋಕಸಭಾ ಚುನಾವಣೆ ದಿನಾಂಕ ಘೋಷಿಸಲು ಮಾರ್ಚ್ 10ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ನೂತನ ಗುಣಮಟ್ಟದ ಕಾರ್ಯಾಚರಣೆ ಪ್ರಕ್ರಿಯೆನ್ನು ಜಾರಿಗೊಳಿಸಲಾಗಿದೆ. ಇದರಿಂದ ಇವಿಎಂ, ಮೀಸಲು ಇವಿಎಂಗಳ ಮೇಲೆ ಜಿಪಿಎಸ್ ನಿಗಾ ಸೇರಿದಂತೆ ತುಂಬಾ ಕಟ್ಟು ನಿಟ್ಟಿನ ಕ್ರಮಗಳು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.

2019ರ ಲೋಕಸಭಾ ಚುನಾವಣೆಯ ಸಂದರ್ಭ ಇವಿಎಂಗಳನ್ನು ಸಾಗಿಸಲು ನಿಯೋಜಿಸಿದ್ದ ವಾಹನಗಳ ಜಿಪಿಎಸ್ ದತ್ತಾಂಶಗಳ ಡಿಜಿಟಲ್ ಪ್ರತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿಯಲ್ಲಿ ಕೇಳಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ, ಚುನಾವಣಾ ಆಯೋಗ ಈ ಆದೇಶವನ್ನು ನೀಡಿದ ಬಳಿಕ, ಅದನ್ನು ಅನುಷ್ಠಾನಗೊಳಿಸಲಾಗಿದೆ ಎಂದು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ವರದಿ ಸಲ್ಲಿಸಬೇಕು ಎಂದಿದ್ದಾರೆ.

‘‘ಚುನಾವಣಾ ಆಯೋಗ ಪ್ರಶ್ನೆಗೆ ಉತ್ತರಿಸದೆ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಅವರು ಮುಖ್ಯ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ವಿವರವಾದ ಸೂಚನೆ ನೀಡಿದ್ದಾರೆ. ಆದುದರಿಂದ ಅವರಿಗೆ ವರದಿ ಬಂದಿರಲೇಬೇಕು’’ ಎಂದು ಖುರೇಶಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News